Wednesday 27 June 2012

ಕಷ್ಟಾನೋ ಸುಖಾನೋ ಓದೋ ವಯಸ್ನಲ್ ಓದ್ಕೊಬೇಕು ಕಣ್ರವ್ವಾ..

ಕಷ್ಟಾನೋ ಸುಖಾನೋ ಓದೋ ವಯಸ್ನಲ್ ಓದ್ಕೊಬೇಕು ಕಣ್ರವ್ವಾ..
ಸಾಲೋ ಸೋಲ ಅದ್ರು ಮಾಡಿ ಪೀಜು ಪುಸ್ತಕ ಕೊಡ್ಸಿ
ಮೈ ಬೆವರು ಹರಸಿ ದುಡ್ಡು ನಾಕ್ಮಂದಿ ಜೊತೆ ಸಾಲೀಗ್
ಕಳ್ಸಿದ್ ಅಪ್ಪ ಅವ್ವನ್ ಆಸೆ ನೀರ್ಪಾಲ್ ಆಗಬಾರದು ಕಣ್ರವ್ವ..

ಅಪ್ಪಿ ತಪ್ಪಿ ನುಸುಲ್ಕೊಂದು ಬಂದ ಮಿಸ್ಕಾಲ್ ಕೊಟ್ಟೋನ
ಮೊಬೈಲ್ ಗೆ ಮೆಸೇಜ್ ಮಾಡ್ತಾ ಮಾಡ್ತಾ ದೋಸ್ತಿ ಮಾಡ್ಕೊಂಡ್
ಪಿಜ್ಜ್ಯಾ ಬರ್ಗರ್ ತಿನ್ಕೊಂಡ್ ಮಲ್ತಿಪ್ಲೆಕ್ಷಲ್ಲಿ ಸಿನಿಮಾ ನೋಡ್ಕಂಡ್
ಬ್ರಿಗೆಡ್ ರೋಡ್ ನ ಪಾರ್ಲರ್ ಲಿ ಪ್ಹೆಸಿಯಲ್ಲೂ, ಬ್ಲೀಚಿಂಗು,
ಮಾಡ್ಕೊಂಡ್ ಸ್ಲಿಮ್ ಫಿಟ್ ಜೀನ್, ಗಾಗ್ರ ಹಾಕೊಂಡ್
ಮೆರೆಯೋ ಆಸೇಲಿ ಹುಟ್ಟಿಸ್ದೊರ್ ಹೂ ಕನಸು
ಬಾಡೋಗ್ ಬಾರದು ಕಣ್ರವ್ವ ...!

ಯಾವ್ ಮಗ ಅದ್ಯಾವ್ ಘಳಿಗೆಲ್ ಹೇಳುದ್ನೋ
ಹೆಣ್ನ್ಮಕ್ಳಂದ್ರೆ ಸೆರಗ ಕಟ್ಕೊಂಡ್ ಬೆಂಕಿ ಅಂತ ?
ಅದ್ಯಾತುಕ್ ಹಂಗಂದ್ನೋ ?
ಈವತ್ಗು ತಾಯದೊಳು ಪದರ್ಗುಟುತಾಳೆ
ನೀವ್ಗಳ್ ಟ್ಯುಶನ್, ಪ್ರೆಂಡ್ ಮನೆ ಅದು ಇದು
ಅಂತ ಆಚೆ ಹೋಗಿ ಬರೋದ್ ತಡ ಆದ್ರೆ !
ಅವರ್ಗೊಳ್ ತಳಮಳ, ಕಳವಳ ಅರ್ಥ ಮಾಡ್ಕೆಂದು
ನೀವಗಳ್ ನಡೀಬೇಕ್ರವ್ವಾ......

Friday 4 May 2012

ಮೌನವೂ ಮರೆತು ಹೋಗಿದೆ
ಮಾತುಗಳನು ಬಿಟ್ಟು ಮರೆಯಾಗಲು
ಎದೆಯಲ್ಲೆಲ್ಲೋ ಬಸಿರುಗಟ್ಟಿದ ಭಾವನೆಗಳು
ಕಮರಿ ಹೋಗುತಿವೆ ತಂತಾನೇ
ನಿನ್ನೊಂದಿಗೆ ತಳಿರು ಹಾಕಿಕೊಳ್ಳಲೂ
ಆಗದೆ ಚಡಪಡಿಸಿ,

ಹೌದು ನೆನೆದರೆ ನೀ ಒಂದು ಅಸ್ಪಷ್ಟ
ಚಿತ್ರ ಕನಸುಗಳಲ್ಲಿ ಎದ್ದು ಕುಳಿತಾಗ ಎಲ್ಲ ಬರಿದು
ಖಾಲಿ ಖಾಲಿ ಮನಸು!
ನೀ ಉಲಿವ ನಾಲ್ಕು ಪದಗಳು
ಮನದಂಗಳದ ಬೆಳದಿಂಗಳು

ಸುಮ್ಮನೆ ನಡೆದು ಹೋಗುವಾಗ ದುತ್ತನೆ
ಎದುರಾಗುತ್ತೀಯ !
ಚಿನ್ನ ರನ್ನ ನನ್ನೊಡೆಯ ...ಅನ್ನುತ್ತೀಯ
ಮತ್ತೆಂದು ಮರೆಯದಷ್ಟು
ಮುದ್ದು ಮುದ್ದಾಗಿ  ಮಾತಾಡುತ್ತೀಯ
ಹೇಳೇ ನಾ ಅಂದ್ರೆ ನಿಂಗೆ ಇಷ್ಟಾನ ?
ನಮ್ ನಡುವೆ ನೀ ಬಿತ್ತಿರುವುದು
ಪ್ರೀತಿ- ಪ್ರೇಮಗಳ ಬಳ್ಳಿನಾ ?
ಕೇಳಿದಾಗಲೆಲ್ಲ ನಿನ್ನ ಮುಗುಳ್ನಗೆಯೇ
ಉತ್ತರ ಅಂತೀಯ ...
ಶಬ್ದ ಕೋಶ ಜಾಲಾದಿಸಿದರೆ
ಎಲ್ಲ ಪದಕೋ ಒಂದರ್ಥ ಇದೆ
ಆದರೆ ಈ ನಿನ್ನ ಮುಗುಳ್ನಗೆಗಲ್ಲ.. ! 
ಹುಚ್ಚೆಬ್ಬಿಸುವ ಮೋಹಕ ನೋಟಕ್ಕಲ್ಲ..!

Monday 9 April 2012

ಬೇಡ ಬೇಡವೆ೦ದರೂ ಬೆನ್ನಟ್ಟಿ ಬರುತ್ತಲೇ ಇವೆ
ಎದೆಗೂಡಿನಲ್ಲಿ ಆಗಾಗ ಕಿಚ್ಚು ಹತ್ತಿಸುವ
ನಿನ್ನ ನೆನಪುಗಳು.

ಸಾಕು ಸಾಕೆ೦ದರೂ ಬಿಡುತ್ತಿಲ್ಲ, ಹಣಿಯುತ್ತಲೇ ಇವೆ
ಎನ್ನಾವೇಶಗಳ, ಬಾವೋದ್ವೇಗಗಳ ಸರಿಮಾಡುವ
ನಿನ್ನ ಧಮನಿಯ ಸದ್ದುಗಳು.

ಉಸಿರಿನ ಉಸಿರೆ೦ದರೂ ಒಪ್ಪುತ್ತಿಲ್ಲ, ನಿರಾಕರಿಸುತ್ತಲೆ ಇವೆ
ಒ೦ದೇ ಒ೦ದು ಬಾರಿ ನೀ ಕೊಟ್ಟ ಮೋಸದ ಪೆಟ್ಟಿಗೆ
ನರಳಿರುವ ನನ್ನೆಲ್ಲ ಭಾವನೆಗಳೂ.

ಕಣ್ಣಲಿ ಕಣ್ಣಿಟ್ಟು ನೋಡಿಕೊ೦ಡರೂ. ಕಾರಣವೂ
ಹೇಳದೇ ಹೊರಟು ಹೋದೆಯಲ್ಲೆ ಕಣ್ರೆಪ್ಪೆ
ಮಿಟುಕಿಸುವ ನಡು ಕ್ಷಣಗಳಲ್ಲೆ...

ಮೊಗೆ ಮೊಗೆದು ನಿನ್ನ ಬೊಗಸೆಗಳಲಿತ್ತ
ತು೦ಬು ಮನಸಿನ ಪ್ರೀತಿಯ ಒದ್ದುಕೊ೦ಡು
ಹೋದ ನೀ ನಿಜಕೂ ನಗುವಿನಲ್ಲಿ ನೊವನಡಗಿಸುವ
ಕಲೆ ಹೇಳಿಕೊಟ್ಟ ಕರುಣಾಮಯಿ !












Friday 6 April 2012

ಭೂಮಿ  ನಿನಗೊಂದು ಹನಿಗವನ
ತಿನ್ನಲು ಕಾಳೂ ಇಲ್ಲ, ಸೇರಲು ಗೂಡೂ ಇಲ್ಲ
ವಿರಮಿಸಲು ಆಸೆರೆಯಾಗಿದ್ದ ಮರವಿಂದು ಪಾಪ, ಬರೀ ಕೊರಡು !
ಬಾನೆತ್ತರಕೆ ಚಿಮ್ಮಿ ಹಾರುತ್ತಿದ್ದ ಹಲವು ಹಕ್ಕಿಗಳಲಿ ನಾನು ಒಂದು,
ರೆಕ್ಕೆಗಳಲಿ ಕಸುವೂ ಇಲ್ಲ ಇಂದು,
ಯಾತಕ್ಕೆ ಮಳೆ ಹೋದವೋ ಶಿವ ಶಿವ ಯಾತಕ್ಕೆ ಮಳೆ ಹೋದವೋ
ಬರದ ಬಿಸಿಗೆ ಧರಣಿ  ತಂಪು ಆಗುವುದು    ಹೇಗೋ ? 
ಹೌದು ಈಗೀಗ ಕಣೀರೂ ಬತ್ತಿಹೋಗಿದೆ!
ಕಾಡುತ್ತಿದ್ದ ನೆನೆಪೆಲ್ಲ ಕರಗಿ ಹೋಗುತ್ತಲೂ ಇವೆ!
ಕೊಟ್ಟ ಪ್ರೀತಿಯ ಅಲ್ಲೆ ಬಿಟ್ಟು ಹೊರಟು ಬ೦ದಿದ್ದರೂ!
ಅಲ್ಲಿದ್ದ ಅಷ್ಟೂ ನೋವ ಹೊತ್ತು ತ೦ದಿದ್ದರೂ!

ಬೇವು ಲೇಪಿಸಿದ ಸಿಹಿತಿನಿಸೊ ನಿನ್ನ ಬದುಕು...
ಹೇಗೆ ತಾನೆ ಸಹಿಸಿಕೊಳ್ಳಲಿ...?
ತ೦ತಾನೆ ಮೂಡಿದ ಸ೦ಭ೦ದವೊ೦ದು
ನಾನಾಗೆ ಹೇಗೆ ಮುರಿದು ಕೊಳ್ಳಲಿ ..?
ನಿನ್ನ ಅಷ್ಟೂ ಅವಘಡಗಳ ಅವಡುಗಚ್ಚಿ
ಇನ್ನೆಷ್ಟು ಮಧುರ ದಿನಗಳ ನಾ ಕಳೆದು ಕೊಳ್ಳಲಿ?

ನಿನ್ನನೆ ಉಸಿರಾಗಿಸಿಕೊ೦ಡು ನಾ ಮೈದು೦ಬಿಕೊ೦ಡ
ಕ್ಷಣಗಳಲಿ ನಿನ್ನಲ್ಲಿದ್ದ ನನ್ನಿಯ ಮಗ್ಗಲು ಬದಲಿಸುತ್ತಿದ್ದ!
ಬೇಕಿರಲಿಲ್ಲ ನನ್ನ ತು೦ಬು ಪ್ರೀತಿ,
ಹುಟ್ಟು ಹಬ್ಬ ನನ್ನದೊ ನಿನ್ನದೊ ಮತ್ಯಾರದೊ....
ಕೊಡುವ ಕಾಣಿಕೆಗಳಿಗೆ ನಾ ಕಟ್ಟುತ್ತಿದೆ ಕ೦ದಾಯ
ತಣಿಸ ಬೇಕಿತ್ತು ನಿನ್ನ ಅಮಲು, ಖರೀದಿಸುವ ತೆವಲು !
ಇದ್ಯಾವ ನೀತಿ? 

ನನ್ನೆಲ್ಲ ಆಸ್ತಿ, ಅ೦ತಸ್ತು, ಹಣ, ಚಿನ್ನ
ಧಾರೆಯೆರೆದ ನ೦ತರವೂ
ಇನ್ನಿಲ್ಲದ೦ತೆ ನಾ ಬಯಸಿದ್ದೇ ನಿನ್ನ,
ನೀನೆ ತರಬಲ್ಲ ಸೂಜಿ ಮಲ್ಲಿಗೆ ಹೂ !

ಇಳಿ ಸ೦ಜೆಗಳಲಿ ಒ೦ಟಿಯಾಗೆ ಕಾಡುದಾರಿಗಳಲಿ
ನನ್ನ ಒಮ್ಮೆ ಅಲ್ಲ ಹಲವಾರು ಬಾರಿ ನೀ ಕಾಯಿಸಿದ್ದೆ,
ಹಸಿ ಹಸಿಯಾಗಿ ಮನವ ನೀ ನೋಯಿಸಿದ್ದೆ!
ಉಮ್ಮಳಿಸುವ ದುಃಖವ ನು೦ಗಿ ಕೊ೦ಡು
ಜಾರಲಿರುವ ಕಣ್ಣೀರ ನಗುವಿನ ಮರೆಯಲ್ಲೆ ಒರೆಸಿಕೊ೦ಡು
ನಿನ್ನ ಕೈಗೆ ನಾನೆ ನನ್ನ ಕೈ ಬೆಸೆದುಕೊ೦ಡು ನಡೆಯುತ್ತಿದ್ದರೆ…….
ನಿನಗೋ... ಹೆಜ್ಜೆಗೊ೦ದು ಅನುಮಾನ!
"ಹೇಳು ಯಾರ ಸ೦ದಿಸಿದ್ದಕ್ಕೆ ಸ೦ತಸ?"
ಚೇಳು ಕುಟುಕಿನ೦ತಾ ಕೊ೦ಕು ಮಾತು !
ಮರೆಯಲಾದೀತೆ ಲೆಕ್ಕವೇ ಇಡದ ಅವಮಾನ !

ನೆನಪಿರಲಿ,
ಕಡಲು ಕೆರಳಿದರೆನೇ ಅಲೆ ಅಪ್ಪಲಿಸೋದು!
ಪ್ರೀತಿ ನರಳಿದರೇನೆ  ಕನಲಿ ನೀರಿಳಿಸೋದು!
ಹೆಂಡತಿ ಜಗಳವಾಡಿದರೆ ಅಡುಗೆ ಮಾಡದೆಯೇ ಮಲಗಿಬಿಡುತ್ತಾಳೆ...
ಹಾಳಾಗ್ ಹೋಗ್ಲಿ ನನಗೇನಂತೆ.... ಅಂತಾ...,
ಆದರೆ ಆಕೆ ಹಾಗಲ್ಲ ಅಡುಗೆ ಮಾಡಿಟ್ಟು ಮಲಗುತ್ತಾಳೆ
ತಿಂದ್ ಮಲಗಲಿ ತಡವಾದ್ರೆನಂತೆ... ಅ೦ತಾ !
ಹೌದು ಆಕೆನೇ
"ಅಮ್ಮ"

"
ಕಣ್ಣೊಳಗೆ ನಾ ಅರಳಿಸಿಕೊಂಡ
ಕನಸುಗಳು ಅಷ್ಟೂ ಕಮರಿಹೊಗುತಿವೆ
ನೀ ಕಟ್ಟಿಕೊಟ್ಟ ನೆನಪುಗಳ ಬುತ್ತಿ
ಬದುಕ ಹಾದಿಯಲ್ಲಿ ಬರಿದಾಗುತಿವೆ
ಬಂದುಬಿಡೆ ಗೆಳತಿ ಅಷ್ಟೂ ಬಂಧನಗಳ
... ಬಳ್ಳಿಗಳ ಬಿಡಿಸಿ ಕೊಂಡು...

ನನ್ನನ್ನೇ ಮಣ್ಣಲ್ಲಿಟ್ಟರೂ ಕರಗದೆ
ನಾ ನಿನ್ನಲ್ಲಿಟ್ಟ ಅನಂತ ಪ್ರೀತಿ,
ಅಂತಹುದರಲ್ಲಿ ಕಣ್ಣೋಟದಿಂದ
ಕ್ಷಣಕಾಲ ನೀ ಮರೆಯಾದರೆ
ಮರುಗದೇನೆ ನನ್ನೀ ಮನಸು ?

ಹೇಳಿಬಿಡಲಾ ಒಮ್ಮೆಲೇ ನಾ ಕಲ್ಪಿಸಿಕೊಂಡ
ನಮ್ಮ ಬಣ್ಣ ಬಣ್ಣದ ಬದುಕಿನ ಬಗ್ಗೆ?
ಕೇಳಿ ಬಿಡಲಾ ಈಗಲೇ ನಮಗುಟ್ಟುವ ಮಗುವಿಗೆ
ಇಡಲಿರುವ ಹೆಸರೇನೆಂದು ?

ನೀ ಹೇಳುವುದು ನಿಜಾ ಕಣೆ,
ದೇಹವಷ್ಟೇ ನನ್ನಲಿರುವುದು
ಮನಸೆಲ್ಲಾ ನಿನ್ನಲ್ಲೇ,
ಮೌನವಷ್ಟೇ ನನ್ನಲ್ಲಿ ಉಳಿದಿರುವುದು
ಮನದ ಭಾವವೆಲ್ಲ ನಿನ್ನಲ್ಲೇ !
ನೀನಲ್ಲದೆ ನನ್ನಲ್ಲಿನೆನಿದೆ?
"