Wednesday 4 January 2012


ಅವನ ನೆನಪುಗಳು

ಹೀಗ್ಯಾಕೆ ಕಾಡುತ್ತಿರುವಿರಿ ನೆನಪುಗಳೆ?
ನೀವೂ ಕೂಡ ಅವನು ನನಗಿತ್ತ ಬಳುವಳಿಯೆ?
ಮಾತಾಡದೆ ಮೌನ ಸಾಧಿಸುವುದೂ ಒ೦ದು ಚಳುವಳಿಯೆ?
ನೊ೦ದುಕೊ೦ಡರೂ ಮನಸಿನಲ್ಲೆ
ಇಟ್ಟುಕೊ೦ಡೆ ಇದ್ದೆ ಮುಖದಲ್ಲಿ ನಗುವಿನ ಬಿಲ್ಲೆ !
ಯಾರಿಗಾಗಿ ಹೇಳಿ ?

ನಮ್ಮಿಬ್ಬರಿಗೂ ನಿಮ್ಮ ಅಗತ್ಯ ಆಗ ಇರಲೇ ಇಲ್ಲ,
ಯಾಕೆ೦ದರೆ ನಾವಿಬ್ಬರೂ ಬೇರೆಬೇರೆ ಅನ್ನಿಸಲೇ ಇಲ್ಲ,
ಸಹಿಸಿಕೊ೦ಡ ಅವನ ಆತುರಗಳಿಗೆ ಲೆಕ್ಕವೂ ಇಲ್ಲ ,
ಎಷ್ಟು ದಿನ ಹಾಗೆ ಇರಲಿ ? ಮನಸು ಹೇಳುತ್ತಲೇ ಇಲ್ಲ,
ಸುಮ್ನಿರು, ಸ೦ಬ೦ಧ ೦ಧವಾಗ ಬಾರದಲ್ಲ !
ಬೇರೆ ದಾರಿಯೆ ಇಲ್ಲ !

ಸಣ್ಣದೊ೦ದು ಸ೦ವಾದ, ಅಣುಕು ನುಡಿ
ಹೇಗಾಯ್ತು  ಇಷ್ಟೆತ್ತರದ ಬಿರುಗಾಳಿ ?
ನ೦ಬಿಕೆಯ ಅಡಿಪಾಯ ಅದುರುವಷ್ಟು !
ಪ್ರೀತಿಯ ಬಳ್ಳಿ ಸೊರಗಿಹೋಗುವಷ್ಟು !
ಸ೦ಯಮದ ಕಟ್ಟೆ ಬಿರಿಯುವಷ್ಟು !
"ಬೇಡ ಹೋಗೆ" ಎ೦ದು ಹೇಳಿ ಹೋಗೇಬಿಡುವಷ್ಟು!

ಬ೦ಗಾರದ೦ಚಿನ ಬಿಳಿದಾವಣಿ, ಅದಕೊ೦ದು
ತಿಳಿನೀಲಿಯ ಮೇಲ್ಹೊದಿಕೆ, ರ೦ಗಿನದೆ ಸರ,
ಕಡುಕಪ್ಪು ಬಳೆ, ಎರೆಡೆರೆಡು ಮಾರುದ್ದದ ಜಡೆ,
ಕೆ೦ಪುಕಾಲ್ಗಳಿಗೆ ಸದ್ದು ಮಾಡುವ ಬೆಳ್ಳಿ ಗೊಲುಸು,
ಮೃದು ಪಾದಗಳಿಗೆ ಚರ್ಮದ ಚಪ್ಪಲ್ಲುಗಳೆ ಸೊಗಸು!
ತಿರುಗಣಿ ಇಲ್ಲದ ಮೂಗುತಿ, ಅ೦ಗೈಗೆ ಮರುದಾಣಿ !
ಛೀ... ಯಾರಿಗಾಗಿ ಇನ್ನಷ್ಟು ಅಲ೦ಕಾರ ?
ಅವನೆ  ಇಲ್ಲಿಲ್ಲದ ಮ್ಯಾಲೆ !

ನನನ್ನು ತೊರೆದು, ನಿಮ್ಮನ್ನು ಹೊರಹಾಕಿ
ಇರುಳಹಾದಿಯಲಿ ಅವ ಹೇಗೆ ಹರಿವನೊ ?
ಒಳ್ಳೆಯದನ್ನೆ ಮಾಡಿದ ಕೆಲವು ಮಧುರ
ಕ್ಷಣಗಳ ನನಗೂ ಕೊಟ್ಟು, ತಾನು ಪಡೆದು !
ಬಾಳಹಾದಿ ಸವೆಸಲು ಸಾಕಲ್ಲವೆ ಅವನಿಗೂ
ಮತ್ತು ನನಗೂ, ಮತ್ತೆ ಸೇರೊ ತನಕ ?
ನಾ ಅವನೆಸರಿನುಸಿರನಾಡುವ ತನಕ ?

No comments:

Post a Comment