Wednesday 27 June 2012

ಕಷ್ಟಾನೋ ಸುಖಾನೋ ಓದೋ ವಯಸ್ನಲ್ ಓದ್ಕೊಬೇಕು ಕಣ್ರವ್ವಾ..

ಕಷ್ಟಾನೋ ಸುಖಾನೋ ಓದೋ ವಯಸ್ನಲ್ ಓದ್ಕೊಬೇಕು ಕಣ್ರವ್ವಾ..
ಸಾಲೋ ಸೋಲ ಅದ್ರು ಮಾಡಿ ಪೀಜು ಪುಸ್ತಕ ಕೊಡ್ಸಿ
ಮೈ ಬೆವರು ಹರಸಿ ದುಡ್ಡು ನಾಕ್ಮಂದಿ ಜೊತೆ ಸಾಲೀಗ್
ಕಳ್ಸಿದ್ ಅಪ್ಪ ಅವ್ವನ್ ಆಸೆ ನೀರ್ಪಾಲ್ ಆಗಬಾರದು ಕಣ್ರವ್ವ..

ಅಪ್ಪಿ ತಪ್ಪಿ ನುಸುಲ್ಕೊಂದು ಬಂದ ಮಿಸ್ಕಾಲ್ ಕೊಟ್ಟೋನ
ಮೊಬೈಲ್ ಗೆ ಮೆಸೇಜ್ ಮಾಡ್ತಾ ಮಾಡ್ತಾ ದೋಸ್ತಿ ಮಾಡ್ಕೊಂಡ್
ಪಿಜ್ಜ್ಯಾ ಬರ್ಗರ್ ತಿನ್ಕೊಂಡ್ ಮಲ್ತಿಪ್ಲೆಕ್ಷಲ್ಲಿ ಸಿನಿಮಾ ನೋಡ್ಕಂಡ್
ಬ್ರಿಗೆಡ್ ರೋಡ್ ನ ಪಾರ್ಲರ್ ಲಿ ಪ್ಹೆಸಿಯಲ್ಲೂ, ಬ್ಲೀಚಿಂಗು,
ಮಾಡ್ಕೊಂಡ್ ಸ್ಲಿಮ್ ಫಿಟ್ ಜೀನ್, ಗಾಗ್ರ ಹಾಕೊಂಡ್
ಮೆರೆಯೋ ಆಸೇಲಿ ಹುಟ್ಟಿಸ್ದೊರ್ ಹೂ ಕನಸು
ಬಾಡೋಗ್ ಬಾರದು ಕಣ್ರವ್ವ ...!

ಯಾವ್ ಮಗ ಅದ್ಯಾವ್ ಘಳಿಗೆಲ್ ಹೇಳುದ್ನೋ
ಹೆಣ್ನ್ಮಕ್ಳಂದ್ರೆ ಸೆರಗ ಕಟ್ಕೊಂಡ್ ಬೆಂಕಿ ಅಂತ ?
ಅದ್ಯಾತುಕ್ ಹಂಗಂದ್ನೋ ?
ಈವತ್ಗು ತಾಯದೊಳು ಪದರ್ಗುಟುತಾಳೆ
ನೀವ್ಗಳ್ ಟ್ಯುಶನ್, ಪ್ರೆಂಡ್ ಮನೆ ಅದು ಇದು
ಅಂತ ಆಚೆ ಹೋಗಿ ಬರೋದ್ ತಡ ಆದ್ರೆ !
ಅವರ್ಗೊಳ್ ತಳಮಳ, ಕಳವಳ ಅರ್ಥ ಮಾಡ್ಕೆಂದು
ನೀವಗಳ್ ನಡೀಬೇಕ್ರವ್ವಾ......

Friday 4 May 2012

ಮೌನವೂ ಮರೆತು ಹೋಗಿದೆ
ಮಾತುಗಳನು ಬಿಟ್ಟು ಮರೆಯಾಗಲು
ಎದೆಯಲ್ಲೆಲ್ಲೋ ಬಸಿರುಗಟ್ಟಿದ ಭಾವನೆಗಳು
ಕಮರಿ ಹೋಗುತಿವೆ ತಂತಾನೇ
ನಿನ್ನೊಂದಿಗೆ ತಳಿರು ಹಾಕಿಕೊಳ್ಳಲೂ
ಆಗದೆ ಚಡಪಡಿಸಿ,

ಹೌದು ನೆನೆದರೆ ನೀ ಒಂದು ಅಸ್ಪಷ್ಟ
ಚಿತ್ರ ಕನಸುಗಳಲ್ಲಿ ಎದ್ದು ಕುಳಿತಾಗ ಎಲ್ಲ ಬರಿದು
ಖಾಲಿ ಖಾಲಿ ಮನಸು!
ನೀ ಉಲಿವ ನಾಲ್ಕು ಪದಗಳು
ಮನದಂಗಳದ ಬೆಳದಿಂಗಳು

ಸುಮ್ಮನೆ ನಡೆದು ಹೋಗುವಾಗ ದುತ್ತನೆ
ಎದುರಾಗುತ್ತೀಯ !
ಚಿನ್ನ ರನ್ನ ನನ್ನೊಡೆಯ ...ಅನ್ನುತ್ತೀಯ
ಮತ್ತೆಂದು ಮರೆಯದಷ್ಟು
ಮುದ್ದು ಮುದ್ದಾಗಿ  ಮಾತಾಡುತ್ತೀಯ
ಹೇಳೇ ನಾ ಅಂದ್ರೆ ನಿಂಗೆ ಇಷ್ಟಾನ ?
ನಮ್ ನಡುವೆ ನೀ ಬಿತ್ತಿರುವುದು
ಪ್ರೀತಿ- ಪ್ರೇಮಗಳ ಬಳ್ಳಿನಾ ?
ಕೇಳಿದಾಗಲೆಲ್ಲ ನಿನ್ನ ಮುಗುಳ್ನಗೆಯೇ
ಉತ್ತರ ಅಂತೀಯ ...
ಶಬ್ದ ಕೋಶ ಜಾಲಾದಿಸಿದರೆ
ಎಲ್ಲ ಪದಕೋ ಒಂದರ್ಥ ಇದೆ
ಆದರೆ ಈ ನಿನ್ನ ಮುಗುಳ್ನಗೆಗಲ್ಲ.. ! 
ಹುಚ್ಚೆಬ್ಬಿಸುವ ಮೋಹಕ ನೋಟಕ್ಕಲ್ಲ..!

Monday 9 April 2012

ಬೇಡ ಬೇಡವೆ೦ದರೂ ಬೆನ್ನಟ್ಟಿ ಬರುತ್ತಲೇ ಇವೆ
ಎದೆಗೂಡಿನಲ್ಲಿ ಆಗಾಗ ಕಿಚ್ಚು ಹತ್ತಿಸುವ
ನಿನ್ನ ನೆನಪುಗಳು.

ಸಾಕು ಸಾಕೆ೦ದರೂ ಬಿಡುತ್ತಿಲ್ಲ, ಹಣಿಯುತ್ತಲೇ ಇವೆ
ಎನ್ನಾವೇಶಗಳ, ಬಾವೋದ್ವೇಗಗಳ ಸರಿಮಾಡುವ
ನಿನ್ನ ಧಮನಿಯ ಸದ್ದುಗಳು.

ಉಸಿರಿನ ಉಸಿರೆ೦ದರೂ ಒಪ್ಪುತ್ತಿಲ್ಲ, ನಿರಾಕರಿಸುತ್ತಲೆ ಇವೆ
ಒ೦ದೇ ಒ೦ದು ಬಾರಿ ನೀ ಕೊಟ್ಟ ಮೋಸದ ಪೆಟ್ಟಿಗೆ
ನರಳಿರುವ ನನ್ನೆಲ್ಲ ಭಾವನೆಗಳೂ.

ಕಣ್ಣಲಿ ಕಣ್ಣಿಟ್ಟು ನೋಡಿಕೊ೦ಡರೂ. ಕಾರಣವೂ
ಹೇಳದೇ ಹೊರಟು ಹೋದೆಯಲ್ಲೆ ಕಣ್ರೆಪ್ಪೆ
ಮಿಟುಕಿಸುವ ನಡು ಕ್ಷಣಗಳಲ್ಲೆ...

ಮೊಗೆ ಮೊಗೆದು ನಿನ್ನ ಬೊಗಸೆಗಳಲಿತ್ತ
ತು೦ಬು ಮನಸಿನ ಪ್ರೀತಿಯ ಒದ್ದುಕೊ೦ಡು
ಹೋದ ನೀ ನಿಜಕೂ ನಗುವಿನಲ್ಲಿ ನೊವನಡಗಿಸುವ
ಕಲೆ ಹೇಳಿಕೊಟ್ಟ ಕರುಣಾಮಯಿ !












Friday 6 April 2012

ಭೂಮಿ  ನಿನಗೊಂದು ಹನಿಗವನ
ತಿನ್ನಲು ಕಾಳೂ ಇಲ್ಲ, ಸೇರಲು ಗೂಡೂ ಇಲ್ಲ
ವಿರಮಿಸಲು ಆಸೆರೆಯಾಗಿದ್ದ ಮರವಿಂದು ಪಾಪ, ಬರೀ ಕೊರಡು !
ಬಾನೆತ್ತರಕೆ ಚಿಮ್ಮಿ ಹಾರುತ್ತಿದ್ದ ಹಲವು ಹಕ್ಕಿಗಳಲಿ ನಾನು ಒಂದು,
ರೆಕ್ಕೆಗಳಲಿ ಕಸುವೂ ಇಲ್ಲ ಇಂದು,
ಯಾತಕ್ಕೆ ಮಳೆ ಹೋದವೋ ಶಿವ ಶಿವ ಯಾತಕ್ಕೆ ಮಳೆ ಹೋದವೋ
ಬರದ ಬಿಸಿಗೆ ಧರಣಿ  ತಂಪು ಆಗುವುದು    ಹೇಗೋ ? 
ಹೌದು ಈಗೀಗ ಕಣೀರೂ ಬತ್ತಿಹೋಗಿದೆ!
ಕಾಡುತ್ತಿದ್ದ ನೆನೆಪೆಲ್ಲ ಕರಗಿ ಹೋಗುತ್ತಲೂ ಇವೆ!
ಕೊಟ್ಟ ಪ್ರೀತಿಯ ಅಲ್ಲೆ ಬಿಟ್ಟು ಹೊರಟು ಬ೦ದಿದ್ದರೂ!
ಅಲ್ಲಿದ್ದ ಅಷ್ಟೂ ನೋವ ಹೊತ್ತು ತ೦ದಿದ್ದರೂ!

ಬೇವು ಲೇಪಿಸಿದ ಸಿಹಿತಿನಿಸೊ ನಿನ್ನ ಬದುಕು...
ಹೇಗೆ ತಾನೆ ಸಹಿಸಿಕೊಳ್ಳಲಿ...?
ತ೦ತಾನೆ ಮೂಡಿದ ಸ೦ಭ೦ದವೊ೦ದು
ನಾನಾಗೆ ಹೇಗೆ ಮುರಿದು ಕೊಳ್ಳಲಿ ..?
ನಿನ್ನ ಅಷ್ಟೂ ಅವಘಡಗಳ ಅವಡುಗಚ್ಚಿ
ಇನ್ನೆಷ್ಟು ಮಧುರ ದಿನಗಳ ನಾ ಕಳೆದು ಕೊಳ್ಳಲಿ?

ನಿನ್ನನೆ ಉಸಿರಾಗಿಸಿಕೊ೦ಡು ನಾ ಮೈದು೦ಬಿಕೊ೦ಡ
ಕ್ಷಣಗಳಲಿ ನಿನ್ನಲ್ಲಿದ್ದ ನನ್ನಿಯ ಮಗ್ಗಲು ಬದಲಿಸುತ್ತಿದ್ದ!
ಬೇಕಿರಲಿಲ್ಲ ನನ್ನ ತು೦ಬು ಪ್ರೀತಿ,
ಹುಟ್ಟು ಹಬ್ಬ ನನ್ನದೊ ನಿನ್ನದೊ ಮತ್ಯಾರದೊ....
ಕೊಡುವ ಕಾಣಿಕೆಗಳಿಗೆ ನಾ ಕಟ್ಟುತ್ತಿದೆ ಕ೦ದಾಯ
ತಣಿಸ ಬೇಕಿತ್ತು ನಿನ್ನ ಅಮಲು, ಖರೀದಿಸುವ ತೆವಲು !
ಇದ್ಯಾವ ನೀತಿ? 

ನನ್ನೆಲ್ಲ ಆಸ್ತಿ, ಅ೦ತಸ್ತು, ಹಣ, ಚಿನ್ನ
ಧಾರೆಯೆರೆದ ನ೦ತರವೂ
ಇನ್ನಿಲ್ಲದ೦ತೆ ನಾ ಬಯಸಿದ್ದೇ ನಿನ್ನ,
ನೀನೆ ತರಬಲ್ಲ ಸೂಜಿ ಮಲ್ಲಿಗೆ ಹೂ !

ಇಳಿ ಸ೦ಜೆಗಳಲಿ ಒ೦ಟಿಯಾಗೆ ಕಾಡುದಾರಿಗಳಲಿ
ನನ್ನ ಒಮ್ಮೆ ಅಲ್ಲ ಹಲವಾರು ಬಾರಿ ನೀ ಕಾಯಿಸಿದ್ದೆ,
ಹಸಿ ಹಸಿಯಾಗಿ ಮನವ ನೀ ನೋಯಿಸಿದ್ದೆ!
ಉಮ್ಮಳಿಸುವ ದುಃಖವ ನು೦ಗಿ ಕೊ೦ಡು
ಜಾರಲಿರುವ ಕಣ್ಣೀರ ನಗುವಿನ ಮರೆಯಲ್ಲೆ ಒರೆಸಿಕೊ೦ಡು
ನಿನ್ನ ಕೈಗೆ ನಾನೆ ನನ್ನ ಕೈ ಬೆಸೆದುಕೊ೦ಡು ನಡೆಯುತ್ತಿದ್ದರೆ…….
ನಿನಗೋ... ಹೆಜ್ಜೆಗೊ೦ದು ಅನುಮಾನ!
"ಹೇಳು ಯಾರ ಸ೦ದಿಸಿದ್ದಕ್ಕೆ ಸ೦ತಸ?"
ಚೇಳು ಕುಟುಕಿನ೦ತಾ ಕೊ೦ಕು ಮಾತು !
ಮರೆಯಲಾದೀತೆ ಲೆಕ್ಕವೇ ಇಡದ ಅವಮಾನ !

ನೆನಪಿರಲಿ,
ಕಡಲು ಕೆರಳಿದರೆನೇ ಅಲೆ ಅಪ್ಪಲಿಸೋದು!
ಪ್ರೀತಿ ನರಳಿದರೇನೆ  ಕನಲಿ ನೀರಿಳಿಸೋದು!
ಹೆಂಡತಿ ಜಗಳವಾಡಿದರೆ ಅಡುಗೆ ಮಾಡದೆಯೇ ಮಲಗಿಬಿಡುತ್ತಾಳೆ...
ಹಾಳಾಗ್ ಹೋಗ್ಲಿ ನನಗೇನಂತೆ.... ಅಂತಾ...,
ಆದರೆ ಆಕೆ ಹಾಗಲ್ಲ ಅಡುಗೆ ಮಾಡಿಟ್ಟು ಮಲಗುತ್ತಾಳೆ
ತಿಂದ್ ಮಲಗಲಿ ತಡವಾದ್ರೆನಂತೆ... ಅ೦ತಾ !
ಹೌದು ಆಕೆನೇ
"ಅಮ್ಮ"

"
ಕಣ್ಣೊಳಗೆ ನಾ ಅರಳಿಸಿಕೊಂಡ
ಕನಸುಗಳು ಅಷ್ಟೂ ಕಮರಿಹೊಗುತಿವೆ
ನೀ ಕಟ್ಟಿಕೊಟ್ಟ ನೆನಪುಗಳ ಬುತ್ತಿ
ಬದುಕ ಹಾದಿಯಲ್ಲಿ ಬರಿದಾಗುತಿವೆ
ಬಂದುಬಿಡೆ ಗೆಳತಿ ಅಷ್ಟೂ ಬಂಧನಗಳ
... ಬಳ್ಳಿಗಳ ಬಿಡಿಸಿ ಕೊಂಡು...

ನನ್ನನ್ನೇ ಮಣ್ಣಲ್ಲಿಟ್ಟರೂ ಕರಗದೆ
ನಾ ನಿನ್ನಲ್ಲಿಟ್ಟ ಅನಂತ ಪ್ರೀತಿ,
ಅಂತಹುದರಲ್ಲಿ ಕಣ್ಣೋಟದಿಂದ
ಕ್ಷಣಕಾಲ ನೀ ಮರೆಯಾದರೆ
ಮರುಗದೇನೆ ನನ್ನೀ ಮನಸು ?

ಹೇಳಿಬಿಡಲಾ ಒಮ್ಮೆಲೇ ನಾ ಕಲ್ಪಿಸಿಕೊಂಡ
ನಮ್ಮ ಬಣ್ಣ ಬಣ್ಣದ ಬದುಕಿನ ಬಗ್ಗೆ?
ಕೇಳಿ ಬಿಡಲಾ ಈಗಲೇ ನಮಗುಟ್ಟುವ ಮಗುವಿಗೆ
ಇಡಲಿರುವ ಹೆಸರೇನೆಂದು ?

ನೀ ಹೇಳುವುದು ನಿಜಾ ಕಣೆ,
ದೇಹವಷ್ಟೇ ನನ್ನಲಿರುವುದು
ಮನಸೆಲ್ಲಾ ನಿನ್ನಲ್ಲೇ,
ಮೌನವಷ್ಟೇ ನನ್ನಲ್ಲಿ ಉಳಿದಿರುವುದು
ಮನದ ಭಾವವೆಲ್ಲ ನಿನ್ನಲ್ಲೇ !
ನೀನಲ್ಲದೆ ನನ್ನಲ್ಲಿನೆನಿದೆ?
"
ಬದುಕಿನ ಕುದುರೆಯ ಕಾಲು ಮುರಿದು ಹೋಗಿಬಿಟ್ಟೆದೆ!
ಮು೦ದೆ ಸಾಗಲು ಆಗದೆ ಸುಮ್ಮನೆ ಇರಲೂ ಆಗದೆ
ತಡವರಿಸಿ, ನೋವ ಸಹಿಸಿ ಸಹಿಸಿ ಕ೦ಗಾಲಾಗಿಬಿಟ್ಟೆದೆ,
ಯಾಕೊ... ಅದರ ಸಾಹೇಬನಿಗೂ ಗರ ಬಡಿದುಬಿಟ್ಟಿದೆ,
ಇತ್ತ ಗಮನವಿಡಲು ಆಗದಷ್ಟು !
ಇನ್ನು ಸರಿ ಪಡಿಸುವ ಮಾತಿಗೆ ಎಡೆ ಎಲ್ಲಿ?
...
ಹೌದು ನನ್ನದು ವಿದಿಯೆ ಖುದ್ದು ನಿ೦ತು ಮಾಡಿದ ಮಣ್ಣಿನ ಕುದುರೆ,
ಆದರೂ ಬಹಳ ಕನಸುಗಳ ಬಣ್ಣ ಬಳಿದು ಬಿಟ್ಟಿದ್ದ.
ಹಗಲಿರುಲೆನ್ನದೆ, ಬಿಸಿಲಲಿ, ಮಳೆಯಲಿ ಬೆವರ ಸುರಿಸಿ
ಓಡಿಸುತ್ತಲೇ ಇದ್ದೆ ಕ೦ಡ ಅಷ್ಟು ಕನಸುಗಳ
ನನಸು ಮಾಡಿಕೊಳ್ಳಲು...!
ಓಟದ ವೇಗದಲಿ, ಕನಸುಗಳ ಕಸಿ ಮಾಡುವ ಭರದಲಿ
ತಡವಿಕೂಡ ನೋಡಿಕೊಳ್ಳಲ್ಲಿಲ್ಲ ಬಣ್ಣ ಕಳೆದುಕೊ೦ಡ
ಮಾಸಲು ಬಣ್ಣದ ಕುದುರೆಯನ್ನ !

ಸವೆಸಿದ ಹಾದಿಯಲ್ಲಿ ಒಮ್ಮೆ ಈಗ ತಿರುಗಿನೋಡಿದರೆ
ಅಲ್ಲೇನಿದೆ? ಕರಗಿಹೋದ ರಸ್ತೆ, ಶವ ಸಾಗಿಸಿದ ಮನೆಯ
ಹೆಸರಿಡಲಾಗದ೦ತ ಮೌನ ! ಸಾದಿಸಿದ್ದಾದರು ಎನು?
ಮುಟಿಗೆಯಷ್ಟು ಹಣ ಮತ್ತು ಇನ್ನೊ೦ದು ರೇಜಿಗೆ ಅಣಿಯಾದ
ಮನಸಿನ ಹು೦ಬತನ ಬಿಟ್ಟರೆ !

ಕಳೆದುಕೊ೦ಡದು ಬಹಳವೆ ಇದೆ...
ಸುಮ್ಮನೆ ಹೇಳುತ್ತಾ ಹೊರಟರೆ!
ಯಾವುದರ ಬಗ್ಗೆ ಹೇಳಲಿ ಈಗ?
ಅಮ್ಮನ ಅಕ್ಕರೆ? ಅಪ್ಪನ ಅಪ್ಯಾಯತೆ?
ಅವಳ ನಿಸ್ವಾರ್ಥ ಪ್ರೇಮ?
ಕನಸಲೂ ಕನವರಿಸುವ ಆಪ್ತ ಮಿತ್ರರ ಸ್ನೇಹ?

ಸಾಕು ಸಾಹೇಬ ನಿನ್ನೀ ದಿವ್ಯ ಮೌನ!
ಬಾ.. ಬ೦ದು..ಕಾಲ ಜರುಗುವ ಮುನ್ನ
ಮುರಿದ ಕುದುರೆ ಕಾಲ ಉಳಿಸಿಬಿಡು..
ಅಡ್ಡಾ ದಿಡ್ಡೀ ಓಡುವ ಬದುಕಿಗೆ
ಸರಿ ಗಮ್ಯವ ನೀನೆ ತೋರಿಸೊ...
“ತುಮೀ ಬ೦ಧು, ತುಮೀ ಸಖ" ಎ೦ಬ
ಮಾತ ಸದಾ ನಿಜ ಎ೦ದೆನಿಸಿಯೂ ಬಿಡು!

Wednesday 1 February 2012

ಇದು ಕವನ ಅಲ್ಲಾ.....

 
ಎಷ್ಟ್ ಹೇಳಿದ್ರು ಕೇಳೋದಿಲ್ಲಾ ಹಾಳಾದ್ ಮನಸು... 
ಗುರುರಾಜ್ ಹೇಳ್ದಂಗೆ ಇದುರ್ದೂ ನಡೆದಿದ್ದೆ ದಾರಿ ! 
 
ಬೇಡ .. ಬೇಕಾಗಿಲ್ಲ ನಿನ್ನ ಪ್ರೀತಿ ಎಂದು ಮುನಿಸಿಕೊಂಡು
ಹೊಂಗೆ ಮರದ ನೆರಳಿಂದ ಹೋದವಳವಳು
ಮತ್ತೆ ಬರುವುದು ಬರೀ ಕನಸೇ..
ನೀ ಎಷ್ಟೇ ಕಾಡಿದರೂ ಬೇಡಿದರೂ ಬಾರಳು ಅಂದ್ರೆ...
"ಸುಮ್ಮನಿರು ..ನೀ ವಿವೇಕ...
ನಿನಗೆನೇನೂ ಗೊತ್ತೇ ಇಲ್ಲ ಅಂದುಕೊಂಡು!  
ಅವಳ್ ಹಂಗೆಲ್ಲ ಬಿಟ್ ಹೋಗೋವ್ಳಲ್ಲ , ನನ್ ಜೀವಾನೇ 
ಅವಳ್ ಕೈಲ್ ಮಡ್ಗಿದೀನಿ  ಮೋಸ ಮಾಡ್ತಾಳಾ ? 
ಅವ್ಳೇ ಮೋಸ ಮಾಡಿದ್ರೆ ಪ್ರಪಂಚದಲ್ ಇನ್ಯಾರ್ನ ನಂಬಲಿ? " ಅನ್ನುತ್ತೆ.. 
 
"ಒಂದುಗುಟ್ಟಿದ್ ಅಂತಮ್ದೀರ್, ಅಕ್ಕತಂಗೀರ್ , ನಬ್ಕಂಡಿದ್ ದೊಸ್ತಿಗಳೇ
ಕೈ  ಕೊಡೊ  ಕಾಲ್ದಾಗೆ  ಆ ಚೋಟುದ್ದದ ಹುಡುಗಿ ಮಾತೆನ್ ತಗೋ ... 
ವಲ್ಳೆದ್ ಯಾವ್ದು ಕೆಟ್ದು ಯಾವುದು ತಿಳ್ಕ ಅಮೇಲ್ ಪ್ರೀತಿ ಮಾಡ್ಲೇ...              
 
ಯಾವತ್ ತಾನೇ ಬುದ್ದಿಮಾತು ಕೇಳಿದೇ ಮನಸು ? "
ಹೆಂಗಾದ್ರೂ ಹಾಳಾಗ್ ಹೋಗ್ಲಿ ಬಿಡಿ...
 
ಆದ್ರೂನು ಆ ಸುಡುಗಾಡ್ ಪ್ರೀತಿಲಿ
ಅದೇನೈತೋ ಅದ್ಯಾಕ್ ಹಿಂಗೆ 
ಕೊಳ್ಳಿ ದೆವ್ವದ್ ತರ ಈ ಮನಸನ್ನ ಕುಣಿಸುತ್ತೋ
ಯಾವನಿಗ್ ಗೊತ್ತು ?
 
ಈ ಭಾವುಕತೆ ಮನಸಿಗ್ ಎಲ್ಲಿಂದ್ ಬಂತು!
ಅವುಳಗ್ಯಾಕೆ ಇವನ ಪ್ರೀತಿ ಗೊತ್ತಿಲ್ಲ ?
ಇವ್ನ್ಗ್ಯಾಕೆ ಅವುಳ್ ಮೋಸ ಗೊತಾಗಲ್ಲ?
ಸುಮ್ಮನ್ನಿದ್  ಮನಸಲ್ಲಿ ಕಲ್ಲಾಕಿದ್ಯಾಕೆ?
 
ಈ ಮನಸು ಒಡೆದು ಚೂರಾದ್ ಮೇಲೆ
" ನಿನ್ ಮಾತ್ ಕೇಳ್ಬೇಕಿತ್ತು ಕನ್ಲೇ ವಿವೇಕಾ" 
ಅಂಥಾ ಕೂಗ್ಕೊಳ್ಲೋದ್ಯಾಕೆ ? 
ಒಸಿ ನೀವಾರು ಹೇಳ್ರುರ್ಲಾ  .. !  

Saturday 7 January 2012

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.     

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.                                                                    
ಬೇಕಾಗಿಯೂ ಇಲ್ಲ ಸಮರ್ಥನೆಯ  ಕಾವು

ಅತ್ತು ಆತ್ತು ಕಣ್ಣೀರು ಬತ್ತಿ ಹೋಗಿದೆ.
ಕನಸುಗಳೂ ಈಗೀಗ ನಿಂತು ಹೋಗಿದೆ
ಮನಸಿನಲ್ಲಿನ ನಿನ್ನ ನೆನಪುಗಳು ಮಾಯವಾಗಿವೆ
ಕಂಗಳಿವೆ ರೆಪ್ಪೆಗಳ ರಕ್ಷಣೆಯಲ್ಲಿ, ನೋಟ ಬರಿದಾಗಿದೆ

ದಿನಗಳನು ಎಣಿಸುತ ನಿನ್ನ ಬರುವಿಕೆ ಕಾದದ್ದು ನಾನೇನಾ ?
ಮು೦ಗುರುಳ ಕೆಣಕುತ  ಕೈ ಅದುಮಿ ನಾನಿರುವೆ ಎಂದಿದ್ದು ನೀನೇನಾ?
ಕೊನೆವರೆಗೂ ಒಟ್ಟಿಗೆ ಸಾಗೋಣ ಬಾಳಿನ ದಾರಿಯಲಿ ಅ೦ದ್ಕೊ೦ಡಿದ್ದು ನಾವೇನಾ ?
ಒಹ್ ಪ್ರೀತಿಯೇ ಒಡೆದ ಕನ್ನಡಿಯ ನೆನಪಿಸುವೆಯ೦ತೆ ನಿಜವೆನಾ ?

ಕಂಡೊಡನೆ ಪಳ ಪಳ ಸುರಿದ ಕಣ್ಣೀರ ಒರೆಸಿದ ನಿನ್ನ ತೋರ್ಬೇರಳಿಗೂ
ಇದು ಸರಿ ಅನ್ನಿಸುವುದೇ ಇಲ್ಲ, ಬೇಕಾದರೆ ಕೇಳಿ ನೋಡು ಇ೦ದಿಗೂ !
ನಿನ್ನ ಒಂದೊಂದು ನೆನಪು ಇಷ್ಟಪಟ್ಟೇ ಉಸಿರಲಿ ಇರಿಸಿಕೊಂಡಿದ್ದೆ
ಧಮನಿಗಳಲರಿವ ನೆತ್ತರ ಕಣಗಳಲ್ಲೂ   ಬೆರೆಸಿಕೊಂಡಿದ್ದೆ
ಇಂದು ಯಾಕೋ ಮುಳ್ಳುಗಳಾಗಿ ಬದಲಾಗಿವೆ,
ಅಣು ಅಣುವನೂ ತಿವಿದು ಚುಚ್ಚುತಿವೆ !
ಇದೇನಾ ಪ್ರೇಮ ಪ್ರೀತಿ ಕೊಟ್ಟ ಬಹು ದೊಡ್ಡ ಕಾಣಿಕೆ !


ಹೇಳಲಾರೆ ನೀ ಇರದೇ ನಾ ಇರಲಾರೆ ಎಂದು,
ಹಾಗಂತ ನೀ ಕರೆಯದೆ ನೀ ಇರುವಲ್ಲಿಗೆ ಬರಲಾರೆ ,
ಮನಸು ಮರ್ಕಟ! ಒಂದೇ ನಿಲುವಿನಲ್ಲಿ ನಿಲ್ಲಲಾರೆ ,
ಹೆಣ್ಣಿಗೂ ಒಂದು ಹಮ್ಮು ಇರುತ್ತೋ ಇನಿಯಾ... ಎ೦ದೆ೦ದೂ!

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.
ಬೇಕಾಗಿಯೂ ಇಲ್ಲ ಸಮರ್ಥನೆಯ  ಕಾವು



Wednesday 4 January 2012


ಅವನ ನೆನಪುಗಳು

ಹೀಗ್ಯಾಕೆ ಕಾಡುತ್ತಿರುವಿರಿ ನೆನಪುಗಳೆ?
ನೀವೂ ಕೂಡ ಅವನು ನನಗಿತ್ತ ಬಳುವಳಿಯೆ?
ಮಾತಾಡದೆ ಮೌನ ಸಾಧಿಸುವುದೂ ಒ೦ದು ಚಳುವಳಿಯೆ?
ನೊ೦ದುಕೊ೦ಡರೂ ಮನಸಿನಲ್ಲೆ
ಇಟ್ಟುಕೊ೦ಡೆ ಇದ್ದೆ ಮುಖದಲ್ಲಿ ನಗುವಿನ ಬಿಲ್ಲೆ !
ಯಾರಿಗಾಗಿ ಹೇಳಿ ?

ನಮ್ಮಿಬ್ಬರಿಗೂ ನಿಮ್ಮ ಅಗತ್ಯ ಆಗ ಇರಲೇ ಇಲ್ಲ,
ಯಾಕೆ೦ದರೆ ನಾವಿಬ್ಬರೂ ಬೇರೆಬೇರೆ ಅನ್ನಿಸಲೇ ಇಲ್ಲ,
ಸಹಿಸಿಕೊ೦ಡ ಅವನ ಆತುರಗಳಿಗೆ ಲೆಕ್ಕವೂ ಇಲ್ಲ ,
ಎಷ್ಟು ದಿನ ಹಾಗೆ ಇರಲಿ ? ಮನಸು ಹೇಳುತ್ತಲೇ ಇಲ್ಲ,
ಸುಮ್ನಿರು, ಸ೦ಬ೦ಧ ೦ಧವಾಗ ಬಾರದಲ್ಲ !
ಬೇರೆ ದಾರಿಯೆ ಇಲ್ಲ !

ಸಣ್ಣದೊ೦ದು ಸ೦ವಾದ, ಅಣುಕು ನುಡಿ
ಹೇಗಾಯ್ತು  ಇಷ್ಟೆತ್ತರದ ಬಿರುಗಾಳಿ ?
ನ೦ಬಿಕೆಯ ಅಡಿಪಾಯ ಅದುರುವಷ್ಟು !
ಪ್ರೀತಿಯ ಬಳ್ಳಿ ಸೊರಗಿಹೋಗುವಷ್ಟು !
ಸ೦ಯಮದ ಕಟ್ಟೆ ಬಿರಿಯುವಷ್ಟು !
"ಬೇಡ ಹೋಗೆ" ಎ೦ದು ಹೇಳಿ ಹೋಗೇಬಿಡುವಷ್ಟು!

ಬ೦ಗಾರದ೦ಚಿನ ಬಿಳಿದಾವಣಿ, ಅದಕೊ೦ದು
ತಿಳಿನೀಲಿಯ ಮೇಲ್ಹೊದಿಕೆ, ರ೦ಗಿನದೆ ಸರ,
ಕಡುಕಪ್ಪು ಬಳೆ, ಎರೆಡೆರೆಡು ಮಾರುದ್ದದ ಜಡೆ,
ಕೆ೦ಪುಕಾಲ್ಗಳಿಗೆ ಸದ್ದು ಮಾಡುವ ಬೆಳ್ಳಿ ಗೊಲುಸು,
ಮೃದು ಪಾದಗಳಿಗೆ ಚರ್ಮದ ಚಪ್ಪಲ್ಲುಗಳೆ ಸೊಗಸು!
ತಿರುಗಣಿ ಇಲ್ಲದ ಮೂಗುತಿ, ಅ೦ಗೈಗೆ ಮರುದಾಣಿ !
ಛೀ... ಯಾರಿಗಾಗಿ ಇನ್ನಷ್ಟು ಅಲ೦ಕಾರ ?
ಅವನೆ  ಇಲ್ಲಿಲ್ಲದ ಮ್ಯಾಲೆ !

ನನನ್ನು ತೊರೆದು, ನಿಮ್ಮನ್ನು ಹೊರಹಾಕಿ
ಇರುಳಹಾದಿಯಲಿ ಅವ ಹೇಗೆ ಹರಿವನೊ ?
ಒಳ್ಳೆಯದನ್ನೆ ಮಾಡಿದ ಕೆಲವು ಮಧುರ
ಕ್ಷಣಗಳ ನನಗೂ ಕೊಟ್ಟು, ತಾನು ಪಡೆದು !
ಬಾಳಹಾದಿ ಸವೆಸಲು ಸಾಕಲ್ಲವೆ ಅವನಿಗೂ
ಮತ್ತು ನನಗೂ, ಮತ್ತೆ ಸೇರೊ ತನಕ ?
ನಾ ಅವನೆಸರಿನುಸಿರನಾಡುವ ತನಕ ?