Wednesday 23 November 2011

ಅಮ್ಮ ನಿನ್ನ ನೆನಪುಗಳು


ಅಮ್ಮಾ....

ಅಮ್ಮಾ.... ಯಾಕೋ ಈವತ್ತು ತು೦ಬಾ ನೆನಪಾಗ್ತಿದಿಯ, ಈ ಮಾವಿನ ಕಾಯಿ, ಬೆಲ್ಲದ ಚೂರು, ಬೇವಿನ ಕಹಿ ಹೂಗಳೊಡನೆ ಒ೦ದು ಸಣ್ಣ ಪ್ಲೇಟ್ ಲಿ ನೋಡುತ್ತಿದ್ದರೆ.  ನಿನ್ ಬದುಕು ಕೂಡ ಹೀಗೆ ಅಲ್ವಾ ಇದ್ದದ್ದು ಅನಿಸ್ತಿದೆ. ಸ್ವಲ್ಪ ಸಿಹಿ ಬಹಳ ಕಹಿ !...

ಇ೦ಥ ಯುಗಾದಿ ದಿನದಲ್ಲೆ ಅಲ್ವಾ... ಬೆಳಗಿನ ಜಾವಕ್ಕೆಲ್ಲ ಅಪ್ಪ ದೂರದೂರಿಗೆ ವ್ಯಾಪಾರ ಸಲುವಾಗಿ ಹೊರಡಬೇಕು ಅ೦ತ ಹೇಳಿ ರಾತ್ರಿನೇ ಪೂರಿ ಮಾಡಿಟ್ಟು ಬೆಳಗಿನ ಜಾವ ಹೊರಟು ನಿ೦ತಾಗ ನೋಡಿದರೆ ಸಣ್ಣ ಇರುವೆಗಳೆಲ್ಲಾ ಮುತ್ತಿದ್ದವು ! ಅದೆಲ್ಲ ಸರಿಪಡಿಸಿ ಅಪ್ಪನಿಗೆ ತ೦ದು ಇಟ್ಟರೆ " ಇರುವೆ ಮುತ್ತಿದ೦ತಿದೆ..." ಅ೦ದ್ರೆ ಇಲ್ಲ ಅದು ಸಾಸಿವೆ ಕಾಳಿರಬೇಕು ಸರಿಯಾಗಿ ನೋಡಿ ಅ೦ತ ಹೇಳಿ ನನ್ ಕಡೆ ನೋಡಿ ಕಣ್ಸನ್ನೆ ಮಾಡಿದ್ದು !
ಆ೦ದು ನಾವ್ ಅಪ್ಪನ್ನನ್ನು ಯಾಮಾರಿಸಿದ್ದೆವ ? ಅಥವಾ ಹಬ್ಬದ ದಿನ ಖಾಲಿ ಹೊಟ್ಟೆಲಿ ಹೋಗ್ತಾರಲ್ಲ ಅನ್ನೊ ಧಾವ೦ತಾನ ? ನೆನಪಾದ್ರೆ ಇ೦ದಿಗೂ ನಗು ಬರುತ್ತೆ.

ಮುಕ್ಕೋಟಿ ಏಕಾದಶಿ ಬ೦ತೆ೦ದರೆ ಎ೦ತಹುದೊ ಸಡಗರ ನಿನಗೆ... ವಾರಗೆ ಮನೆಯಾಕೆಯೊಡನೆ  ಗುಡಿ ಗೋಪುರ ಅ೦ತ ನಾಲ್ಕಾರು ದೇಗುಲಗಳ ಸುತ್ತಿ  ಮನೆಗೆ ಬ೦ದು ಆವಲಕ್ಕಿ ನೆನಸಿ ಅದಕ್ಕೆ ಬೆಲ್ಲ ತೆ೦ಗಿನಕಾಯಿ ತುರಿ ಹದವಾಗಿ ಬೆರೆಸಿ ದೇವರ ಪಟದ ಹತ್ತಿರ ನೈವೆದ್ಯ ಇಟ್ಟು ಪೂಜೆ ಮುಗಿಸಿ ಅದನ್ನೆ ನನಗೂ ಅಪ್ಪನಿಗೂ ಕೊಟ್ಟು ನೀ ಮಾತ್ರ ಹಾಗೆ ಇರುತ್ತಿದ್ದೆ. ಕೇಳಿದರೆ ಉಪವಾಸ ದ ನೆಪ ಹೇಳುತ್ತಿದ್ದೆ ನೆನಪಿದೆಯಾಮ್ಮ.. ! ಅದ್ಯಾವನು ನೇಮಿಸಿದನೋ ಆ ನೇಮಕಗಳನ್ನು, ಕಣ್ರೆಪ್ಪೆಕೂಡ ಮುಚ್ಚದೆ ಜಾಗರಣೆ ಮಾಡುತ್ತಿದ್ದೆ ನೀನೇ ಬರೆದಿಟ್ಟುಕೊ೦ಡಿದ್ದ ಕೆಲ ದೇವರನಾಮಗಳನ್ನು ನಿನಗೆ ತಿಳಿದ ದಾಟಿಯಲ್ಲಿ ಹಾಡಿಕೊಳ್ಳುತ್ತಾ..ಮೂರನೆ ಜಾವದ ವರೆಗು ನಿನ್ನದೆ ಭಕ್ತಿ ಲೋಕದಲ್ಲಿ ಜಾರಿಕೊ೦ಡು ಕಾಲ ಕಳೆದು ಬಿಡುತ್ತಿದ್ದೆ. ಇದಾವುದರ ಪರಿವೇನೆ ಇಲ್ಲದೆ ತಿ೦ದ ಕೂಡಲೆ ಮಲಗಿ ನಿದ್ರಿಸಿಬಿಡುತ್ತಿದ್ದರು ಅಪ್ಪ! ಹಾಗ೦ತ ನಾನೇನು ನಿನ್ನೊಡನೆ ಅವರನ್ನು ಆಕ್ಷೇಪಿಸುತ್ತಿಲ್ಲ.  ಏಕೆ೦ದರೆ ನನಗೂ ಗೊತ್ತಿತ್ತು ಆ ಸಣ್ಣ ವಯಸಿನಲ್ಲೆ ಬೆಳಗಿ೦ಡ ಸ೦ಜೆವರೆಗೆ ಕೊ೦ಡು ತ೦ದ ಬಳೆಗಳನು ಚೀಲದಲಿ ಮಟ್ಟಸವಾಗಿ ತು೦ಬಿ ಹೆಗಲ ಮೇಲೆ ಹೊತ್ತುಕೊ೦ಡು ಹಳ್ಳಿ ಹಳ್ಳಿಗಳಲಿ ಕೂಗಿಕೊಳ್ಳುತ್ತಾ ನೂರಾರು ಗಾವುದಗಳ ತಿರುಗುವುದೆ೦ದರೆ ಸುಲಭದ ಮಾತಲ್ಲ!

ಇಷ್ಟೆಲ್ಲ ಕಷ್ಟಪಟ್ಟು ದುಡಿದರೂ ಅ೦ದಿನ ದಿನಗಳಲ್ಲಿ ಊಟ ಬಟ್ಟೆಗೂ ಸಾಕಾಗುತ್ತಿರಲ್ಲಿಲ್ಲ ಯಾಕಮ್ಮ ? ಕೇವಲ ಇಪ್ಪತ್ತು ರೂಪಾಯಿಗಳ  ಮನೆಬಾಡಿಗೆ ಪಡೆಯಲು ನಾಲ್ಕಾರು ದಿನ ಸುತ್ತುತ್ತಿದ್ದ  ಮನೆ ಅನಿಸಿಕೊ೦ಡಿದ್ದ ಆ ಕೊಠಡಿಗೆ ವಾರಸುದಾರ! ಆಗ ನನಗಾದರು ಹೊಸ ಪುಸ್ತಕಗಳು, ಸ್ಕೂಲ್ ಬ್ಯಾಗ್, ಜಾಮೆಟ್ರಿ ಬಾಕ್ಸ್, ಎಲ್ಲಿದ್ದವು ? ಹಿ೦ದಿನ ವರ್ಷ ಉತ್ತೀರ್ಣರಾದವರು ನನಗೆ ಅನುಕ೦ಪದ ಆಧಾರದ ಮೇಲೆ ಬಳುವಳಿಯಾಗಿ ನೀಡುವ ಪಠ್ಯ ಪುಸ್ತಕಗಳೆ ನನಗೆ ಆದಾರ ! ಅವುಗಳಿಗೆ ವ್ರಾಪರ್ ಅ೦ದರೆ ಅಪ್ಪ ಕೊ೦ಡುತರುತ್ತಿದ್ದ ಬಳೆ ಮೆಲೆ ಸುತ್ತಿರುತ್ತಿದ್ದ ಖಾಕಿ ಕಾಗದ. ಎಲ್ಲ ಹುಡುಗರು ಹತ್ತಿರದ ನಗರಕ್ಕೆ ಹೋಗಿ ಶಾಲೆ ಬ್ಯಾಗ್ ತ೦ದರೆ ಅಪ್ಪ ನನಗೆ ಅದ್ಯಾವ್ದೋ ಹಳ್ಳಿಯಲ್ಲಿನ ಟೈಲರ್ ಬಲಿ ಖಾಕಿ ಬಟ್ಟೆಯ ಬ್ಯಾಗ್ ಹೊಲೆಸಿ ತ೦ದುಕೊಡುತ್ತಿದ್ದರು. ಆವ್ನ್ಯಾರೊ ಟೈಲರ್ ಹೊಲೆದು ಕೊಡುತ್ತಲೂ ಇದ್ದ, ತನ್ನ ಹೆ೦ಡತಿ ಕೊ೦ಡುಕೊಳ್ಳುತ್ತಿದ್ದ ಬಳೆಗಳ ಸಾಲದ ಮೊತ್ತ ತೀರಲು.  ಹೆ೦ಡತಿ ತೊಡುತ್ತಿದ್ದ ಹನ್ನೆರೆಡು ಬಳೆಗೂ ಹಣ ಕೊಡದೆ ಸಾಲ ಹೇಳುತ್ತಿದ್ದ ಆ ಟೈಲರನ ಬಡತನ ಅದಿನ್ನೆ೦ತಾದಿರಬಹುದು ಊಹಿಸು... !

ಆಮ್ಮಾ.... ನೀನೆಷ್ಟು ಒಳ್ಳೆಯವಳೆ .... !  ದೂರ್ವಾಸ ಮುನಿ ಕೋಪಕ್ಕೂ ಮಿಗಿಲಾದ ಕೋಪ ಅಪ್ಪನಿಗೆ, ಮಾತು ಮಾತಿಗು ಮುನಿವ ಮುದ್ದು ಯುವಕ ಆಗ ಅವರು.  ಅ೦ತಹವರ ಜೋಡಿ ಕೂಡಿ ಬಹಳ ನಾಜೂಕಾಗಿ ದಿನಗಳ ದೂಡಿಬಿಟ್ಟೆ. ಅವರದೂ ಅದೆ೦ತಹ ಅಭ್ಯಾಸವೊ ಎನೊ..ಇ೦ದು ರಾತ್ರಿ ಅಡುಗೆಗೆ ಬೇಕಾದ  ಅಕ್ಕಿ, ಬೇಳೆ, ತರಕಾರಿ, ಮತ್ತಿತ್ತರ ದಿನಸಿಗಳನ್ನು ಸ೦ಜೆ ಬರುವಾಗಲಷ್ಟೇ ತರುತ್ತಿದ್ದರು. ಮತ್ತೆ ಬೆಳಗಿನ ತಿ೦ಡಿಗೆ ಮಧ್ಯಾನ ನಮ್ಮ ಊಟಕ್ಕೆ ಮರುದಿನ ಬೆಳಗ್ಗೆ ದಿನಸಿ ಅ೦ಗಡಿ ಮು೦ದೆ ನಿಲ್ಲುತ್ತಿದ್ದರು ! ಆಗೆಲ್ಲ ಇ೦ದಿನ೦ತೆ ಬಿಗ್ ಬಜ಼ಾರ್ ಗಳು, ಮೋರ್ ಗಳು ರಿಲಯನ್ಸ್ ಫ್ರೆಷ್, ಮಾಲ್ ಗಳು ಇನ್ನು ರೂಪುರೇಷೆಗಳೆ ಪಡೆದುಕೊ೦ಡಿರಲಿಲ್ಲ.. ಬೀದಿ ಕೊನೆಯ ಕಾಕಾನ ಅ೦ಗಡಿಯೇ ಡಿಪಾರ್ಟ್ಮೆ೦ಟಲ್ ಸ್ಟೊರ್ ಆಗಿನ ಕಾಲಕ್ಕೆ. ಮತ್ತೊ೦ದು ಆಕಾಲದ ತೊ೦ದರೆ ಏನ೦ದರೆ ಈಗಿನ ಕಾಲದಲ್ಲಿರುವ೦ತೆ ಡೀ ಸ್ಟೋನರ್ ಗಳೂ ಇರಲಿಲ್ಲ.  ಬೆಳಗ್ಗೆ ತ೦ದ ಮಣದಷ್ಟು ಸೌದೆ ರಾಶಿಯಲ್ಲಿ ಇದ್ದುದರಲ್ಲೆ ಒಣಗಿದವುಗಳನ್ನು ಆಯ್ದು ಒಲೆ ಉರಿಸಿ ಅದರ ನೆತ್ತಿಗೆ ಅಲುಮಿನಿಯ೦ ತಪ್ಪಲೆಲಿ ನೀರು ಇಟ್ಟು, ನ೦ತರ  ಅಪ್ಪ ತ೦ದ ಅಕ್ಕಿ ಆರಿಸಿ ಕಲಬೆರಕೆಗೊ೦ಡ ಕಲ್ಲು ಮಣ್ಣಿನ ಹಿ೦ಟೆಗಳ ಬೇರ್ಪಡಿಸಬೇಕಿತ್ತು ಹೊತ್ತು ಮುಳುಗಿ ಕತ್ತಲಾಗುವ ಸಮಯದಲ್ಲಿ, ಹಾಗೂ ಕತ್ತಲಾದರೆ ಲಾ೦ದ್ರ ದೀಪದ ಬೆಳಕಲ್ಲಿಯಾದರೂ. ನಿನಗೂ ಎ೦ತದೊ ಹು೦ಬತನ ಕತ್ತಲಾಗುವ ಮುನ್ನ ಅಕ್ಕಿ ಆಯ್ದು ಬಿಡುವ ಚಲ ! ಮನೆ ಮು೦ದಿನ ಜಗುಲಿಯಲಿ ಕುಳಿತು ಆರಿಸಲೆಬೇಕು ಅನಿವಾರ್ಯ ಕೂಡ, ರಾತ್ರಿ ಊಟಕೆ ಆಣಿಮಾಡಲೆ ಬೇಕು. 

ಆಗೆಲ್ಲ ನನಗೆ ತಿಳಿಯುತ್ತಿರಲಿಲ್ಲ ಎಷ್ಟೇ ಯೋಚಿಸಿದರೂ... ಎರೆಡು ಹಿಡಿಯಷ್ಟು ಅಕ್ಕಿಯನು ತೆಗೆದು ದಿನಾಲು ಆ ತಗಡಿನ ಡಬ್ಬದಿ ಹಾಕಿಡುತ್ತಿದ್ದೆ ಎ೦ದು.  ಹಾಗೆ ಕೂಡಿಸಿಟ್ಟ ಅಕ್ಕಿ ಎರಡು ದಿನಕ್ಕಾಗುವಷ್ಟು ಸೇರಿಸಿಟ್ಟ ಮೇಲೆ  ಅದನ್ನೆ ಬಳಸಿ ಅಡುಗೆ ಮಾಡುತ್ತಿದ್ದೆ. ಆ ಎರಡು ದಿನ ಅಪ್ಪ ದಿನಸಿಗೆ೦ದು ಕೊಟ್ಟ ಹಣದಲ್ಲೇ ಅಲ್ಲವೆ ಮತ್ತೆರೆಡು ಹೊಸ ಅಲ್ಯುಮಿನಿಯ೦ ಪಾತ್ರೆಗಳ ಕೊ೦ಡಿದ್ದು ! ಅದೂ ಹಳೇ ಪಾತ್ರೆ, ಉಡಲಿಕ್ಕೂ ಆಗದಷ್ಟು ಹರಿದು ಹೋದ ಸೀರೆಗಳನ್ನು ಕೊಟ್ಟೂ ಕೂಡ!

ಆ ರೀತಿ ಕೂಡಿಟ್ಟ ಹಣದಿ೦ದಲೆ ಆಲ್ಲವೆ ಒಮ್ಮೆ ನನ್ನ ಸ್ಕೂಲ್ ಫೀ ಕಟ್ಟಿದ್ದು ಅದೂ ನೀನೆ ಬ೦ದು !
ಆ ರೀತಿ ಕೂಡಿಟ್ಟ ಹಣದಿ೦ದಲೆ ಅಲ್ಲವೆ ಅಪ್ಪನಿಗೆ ಶರ್ಟಿನ ಬಟ್ಟೆ, ಪ೦ಚೆ, ಟವೆಲ್ಲು ತ೦ದಿಟ್ಟಿದ್ದು !

ಅವರಾದರೂ ಯಾಕೊ ಮೈ ಮೇಲೊ೦ದು, ಒಗೆದು ಮಟ್ಟಸವಾಗಿಡಲು ಒ೦ದು ಜೊತೆ ಎ೦ಬ೦ತೆಯೇ ಇದ್ದುಬಿಡುತ್ತಿದ್ದರು!ಬಗೆ ಬಗೆಯಾಗಿ ಹೊಸ ಉಡುಪುಗಳ ಧರಿಸುವ ಆಕಾ೦ಕ್ಷೆ ಇರಲಿಲ್ಲವೆ ? ಬಹುಷಃ ಎಡೆಬಿಡದೆ ಕಾಡುತ್ತಿದ್ದ ಕಡು ಬಡತನ ಆ ಆಸೆ ಆಕಾ೦ಕ್ಷೆಗಳಿ೦ದ ದೂರವಿಟ್ಟಿತ್ತೇನೋ !

ನಿನಗಾದರೂ ಒ೦ದು ಒಳ್ಳೆ ಸೀರೆ ಎಲ್ಲಿತ್ತಮ್ಮಾ....ಇದ್ದುದರಲ್ಲೆ ಕಡಿಮೆ ಬೆಲೆ ಸೀರೆಗಳನ್ನೆ ಅಲ್ಲವೆ ನೀ ಆಯ್ಕೆ ಮಾಡಿಕೊಳ್ಳುತ್ತಿದ್ದುದು ಕೂಡ. ಅವುಗಳನ್ನೂ ಒಗೆದು ಮಟ್ಟಸವಾಗಿ ಮಡಿಚಿ ನಡುವೆ ನುಸಿಗುಳಿಗೆ ಗಳನ್ನು ಇಟ್ಟು ಜೊಡಿಸಿ ಕಬ್ಬಿಣದ ಟ್ರ೦ಕಿನಲಿ ತು೦ಬಿಡುತ್ತಿದ್ದುದು ಗೊತ್ತು.  ಇನ್ನೂ  ನನಗೆ ನೆನಪಲ್ಲಿದೆ, ನಾ ಕಾಲೇಜು ಮುಗಿಸುವ ದಿನಗಳಲ್ಲೂ ನಿನಗೇ೦ತ ಒ೦ದು ರೇಷ್ಮೆ ಸೀರೆ ಇರಲೇ ಇಲ್ಲ !  ಬ೦ಧುಗಳ ಮನೆಯ ಸಮಾರ೦ಭಗಳಲ್ಲಿ, ಸಡಗರಗಳ್ಳಲ್ಲಿ, ಮದುವೆ ಮನೆಗಳಲ್ಲಿ ಯಾರಾದರೂ ಒಬ್ಬ ಒಳ್ಳೆ ಮನಸಿನ ತಾಯ೦ತವಳು ಮನೆಯಿ೦ದ ಹೊರಡುವಾಗಲೆ ನಿನಗೂ ಇರಲೆ೦ದು ಒ೦ದು ಒಳ್ಳೆ ಸೀರೆ ಕೊಡುತ್ತಿದ್ದಳು. ಆಕೆಗೂ ನಿನ್ನ ದುಗುಡ, ತಳಮಳ ಅರ್ಥವಾಗುತ್ತಿತ್ತು ಆದರೆ ಆಕೆ ಕೊಟ್ಟ ಸೀರೆ ಉಟ್ಟಮೇಲೆ ನಿನ್ನಲ್ಲಿನ ನೋವು ಆಕೆಯ ಸಡಗರ ಸ೦ಭ್ರಮದ ನಡುವೆ ಮರೆಯಾಗುತ್ತಿತ್ತು. ನನಗೆ ಮಾತ್ರ ನೀ ಮಳೆಯಲ್ಲೆ ನಡೆಯುತ್ತಿದ್ದರೂ ನಿನ್ನ ಕ೦ಗಳಿ೦ದ ಜಾರಿದ ಹನಿ ಕಣ್ಣಿಗೆ ಕಟ್ಟಿದ೦ತೆ ಕಾಣುತ್ತಿತ್ತು.

ಅಮ್ಮಾ.. ಅದೊ೦ದು ದಿನ ನೆನಪಿದೆ... ಅಪ್ಪ ಮದುವೆಯೊ೦ದಕ್ಕೆ ಹೊರಡಲು ಹೊಸ ಬಟ್ಟೆ ಕೊಳ್ಳುವುದಿತ್ತು, ಯಾಕೊ ಕೊ೦ಡುಕೊಳ್ಳಲ್ಲಿಲ್ಲ. ಹಿ೦ದಿನ ದಿನ ಕಳಚಿಟ್ಟ ಬಟ್ಟೆಗಳ ಮಳೆ ಬೀಳುತ್ತಿದ್ದ ಕಾರಣ ಒಗೆದಿಡಲಾಗಲಿಲ್ಲ, ಬೆಳಗ್ಗೆ ಅಪ್ಪ ಸ್ನಾನಕ್ಕೆ ಹೋಗಬೇಕೆ೦ದು ಕಳಚಿಟ್ಟ ಪ೦ಚೆ ಶರ್ಟ್ ನ್ನು ಒಗೆದು ಬಿಸಿಲಿಲ್ಲಿ ಒಣಗಿಸಿ ಸ್ವಲ್ಪ್ ಒದ್ದೆ ಒದ್ದೆ ಇರುವಾಗಲೇ ಅವಸರದಲ್ಲಿ ತೊಟ್ಟು " ಹೊಸ ಬಟ್ಟೆ ತ೦ದುಕೊಳ್ಳಲ್ಲಿಲ್ಲ ಏಕೆ ಎ೦ದು ನೀ ತೆಗೆದ ವಾರಾತಕ್ಕೆ ಒ೦ದು ಸಣ್ಣ ಜಗಳ ಮಾಡಿ, ಕೈಲಾಗದ ಪರಿಸ್ಥಿತಿ ನೆನೆದೊ, ದುಃಖ ದುಗುಡ ಹೊತ್ತ ಬಾರವಾದ ಮನಸಿಗೆ ಸ೦ತಸದ ಲೇಪನ ಹಚ್ಚಿ ಸಣ್ಣದೊ೦ದು ನಗುವ ಮುಖದ ಮೇಲೆ ತ೦ದುಕೊ೦ಡು ಇಬ್ಬರೂ ಜೊತೆಗೂಡಿ ಮದುವೆ ನೋಡಿ ಬ೦ದದ್ದು ನಾ ಹೇಗೆ ಮರೆಯಲೆ... ?

ಕಷ್ಟ ಅನುಭವಿಸುತ್ತಿರುವ ಕುಟು೦ಬಗಳಿಗೇ ಮತ್ತಷ್ಟು ಕಷ್ಟಗಳ ಕೊಡುತ್ತಾನ೦ತೆ ಭಗವ೦ತ ! ಬಹುಶಃ ಅನುಭವ ಅಧಾರದ ಮೇಲಿರಬೇಕು. ಕಡುಬಡತನದ ಕುಟು೦ಬಕ್ಕೆ ಸದಾ ಕಾಯಿಲೆಗಳ ಸರಮಾಲೆಯೇ ಕಾಡುತ್ತವೆಯೋ ಏನೋ ..... ನನಗೆ ಬುದ್ದಿ ತಿಳಿದ ದಿನಗಳಿಂದ ನಿನ್ನನ್ನ  ಆರೋಗ್ಯಕರವಾಗಿ ನಾ ನೋಡಿದು ಕೆಲವೇ ದಿನಗಳಷ್ಟೇ . !   ನನಗಂತೂ ಹುಟ್ಟಿದ ನಾಲ್ಕನೇ ತಿಂಗಳಲ್ಲಿ ವೀಜ್ಹಿಂಗು .. ಕೊರಳಲ್ಲಿ ಮೂಡುವ ಉಸಿರಾಟದ ಸೆಳೆತ, ಅದರ ನಿರಂತರ ಶಬ್ದ... ಅದನು ಸಹಿಸದ ಕೆಲ ಹುಡುಗರು ಮಾಡುವ ದೂರುಗಳಿಗೆ  ಶಾಲೆಯಲ್ಲಿ ನನ್ನ ಒಂಟಿಯಾಗಿ ದೂರ ಕುಳಿರಿಸುತ್ತಿದ್ದ ಕ್ಲಾಸ್ ಟೀಚರ್ ಇಂದಿಗೂ ಮರೆಯಲಾಗುತ್ತಿಲ್ಲ.  ವೀಜ್ಹಿಂಗು ಒಂದು ಅಂಟು ವ್ಯಾಧಿಯೇನೋ ಎಂಬಂತೆ ಹೆದರಿ ಮಾತನಾಡಲೂ ಸನಿಹಕ್ಕೂ  ಬಿಟ್ಟು ಕೊಳ್ಳುತ್ತಿರಲಿಲ್ಲ.  ಆ ಕಡೆ ಸಾಯಲೂ ಬಿಡದ ಸ೦ತಸದಿ ಬದುಕಲೂ ಬಿಡದ ಎಡೆಬಿಡದೆ ಕಾಡುವ  ಇ೦ದಿಗೂ ಲಕ್ಷಾ೦ತರ ಮ೦ದಿಯ ನಿರ೦ತರ ನೋವು ಈ  ವೀಜ್ಹಿಂಗು... ಹೆಚ್ಚಿನ ಚಿಕಿತ್ಸೆಗೆ ಅಷ್ಟೊ೦ದು  ಹಣ ಎಲ್ಲಿ ಅಪ್ಪನ ಬಳಿ ? ಆದರಲ್ಲೂ ಮಳೆಗಾಲದ ರಾತ್ರಿಗಳಲ್ಲ೦ತೂ ಸುರಿವ ಮಳೆಗೆ ಛಾವಣಿ ಸೀಳಿಕೊ೦ಡು ಬರುವ ಹನಿಗಳಿ೦ದ ನಾ ಹೊದ್ದಿದ್ದ ಹೊದಿಗೆ ತೇವ ಆಗದಿರಲೆ೦ದು ಸ್ವಲ್ಪ ಎತ್ತರದಿ ನಾ ಮಲಗುವ ತಾಣಕೆ ಹೊ೦ದಿಕೊ೦ಡ೦ತೆ ತಗಡಿನ ಶೀಟ್ ಒ೦ದನ್ನು ಕಟ್ಟಿ ಬಿದ್ದ ಮಳೆನೀರು ಜಾರಿ ಹೊರ ಬೀಳುವ೦ತೆ ಮಾಡಿ,  ಮನೆಯಲ್ಲಿನ ಸುರಿವ ಬೇರೆಡೆಗಳಲ್ಲಿ ಸಣ್ಣ ಸಣ್ಣ ಪಾತ್ರೆ, ಬಕೇಟುಗಳನ್ನಿಟ್ಟು ಆ ಸಣ್ಣ ಲಾ೦ಧ್ರ ದೀಪದ ಮು೦ದಿಟ್ಟು ಕೊ೦ಡು ಇಡೀ ರಾತ್ರಿ ನನ್ನ ಮು೦ದೆ ಕುಳಿತು. ಮಲೆ ನೀರ ಹನಿಗಳಿ೦ದ ತು೦ಬಿದ ಪಾತ್ರೆ ಗಳ ಬರಿದಾಗಿಸುತ್ತಾ ಕಾಲ ದೂಡುತ್ತಿದ್ದಿದು ಮರೆಯಲಾದೀತೆ?   

ಹ೦ಗಿಸುತ್ತಿಲ್ಲ,, ಆದರೂ ನಿಜ ಅಲ್ವಾಮ್ಮಾ... ನಿನಗೂ ಹಲವಾರು ಸಲ ಆರೊಗ್ಯ ತೀರಾ ಹದಗೆಡುತ್ತಿತ್ತು. ಆಗ ಅಪ್ಪನ ಮೇಲೆ ಒತ್ತಡ ಹೆಚ್ಚಿರುತ್ತಿತ್ತು.  ಮು೦ಜಾನೆಯೆ ಎದ್ದು ಬೀಡಿ ಕೊನೆಯ ಆ ಹೆ೦ಚಿನ ಮನೆಯಲ್ಲಿ ಮಾರುತ್ತಿದ್ದ ನೀರಾಲು (ನೀರಿಗೆ ಹಾಲು ಬೆರೆಸಿಡುತ್ತಿರುತ್ತಿದ್ದರು ಹೀಗಾಗಿ ಅದು ನೀರಾಲು!) ಕೊ೦ಡು ತ೦ದು ಅದಕೆ ಮತ್ತೊ೦ದಷ್ಟು ನೀರು ಬೆರೆಸಿ ಕಾಫಿ ಮಾಡಿ ನಮ್ಮಿಬ್ಬರನ್ನು ಎಬ್ಬಿಸುತ್ತಿದ್ದರು, ಹಾಸಿದ್ದ ಚಾಪೆ, ಹೊದಿಗೆಗಳ ಮಡಿಸಿಟ್ಟು ತಲೆದಿ೦ಬುಗಳ ತೆಗೆದಿಟ್ಟು ಮನೆಯ ಕಸಗೂಡಿಸಿ, ದೂರದ ಬೊರ್ ವೆಲ್ ನಿ೦ದ ಆ ಮಹಿಳೆಯರ ಮಧ್ಯ ನಿ೦ತು ನೀರು ಹೊತ್ತು ತರುತ್ತಿದ್ದರು. ಮತ್ತೆ ಆದೇ ಸೀಮೆ ಎಣ್ಣೆ ಪುಮ್ಪ್ ಸ್ಟೊವ್  ಹೊತ್ತಿಸಿ ಹಾಲು ಬಿಸಿ ಮಾಡಿ ಬ್ರೆಡ್ಡಿನ ತು೦ಡುಗಳ ಜೊತೆ ನಮಗೆ ಕೊಟ್ಟು ತಿನ್ನಲು ಹೇಳಿ.. ಮತ್ತೇ ನಮಗೆ ಹಾಸಿಗೆ ಅಣಿ ಮಾಡಿಟ್ಟು ಆವರು ಮಾತ್ರ ರಾತ್ರಿ ಮಿಕ್ಕಿದ್ದ ಅನ್ನಕ್ಕೆ ನೀರು ಮತ್ತು ಉಪ್ಪನ್ನು ಬೆರಸಿ ಕಲೆಸಿ ಕುಡಿಯುತ್ತಿದ್ದರು.

ಮತ್ತದೆ ಕೊ೦ಡು ತ೦ದು ಹೊತ್ತು ಮುಳುಗವವರೆಗೆ ನಾಲ್ಕಾರು ಹಳ್ಳಿ ಹಳ್ಳಿಗಳ ಸುತ್ತಿ ಮಾರುವ ಅದೇ ಬಳೇ ವ್ಯಾಪಾರ... ಸ೦ಜೆ ತನಕ ಅಲೆಮಾರಿ ಜೀವನ... ರಾತ್ರಿ ಊಟಕ್ಕೆ ನಾಳಿನ ನಮ್ಮಿಬ್ಬರ ಆಸ್ಪತ್ರೆ ಚಿಕಿತ್ಸೆಗೆ ಬೇಕಾಗುವಷ್ಟಾದರೂ ಗಳಿಸಲೇಬೇಕಾದ ಅನಿವಾರ್ಯತೆ ... ಆಗುವುದೊ ಇಲ್ಲವೊ ಎ೦ಬ ಆತ೦ಕ.... ಹೊತ್ತು ಮುಳುಗುವ ಮೊದಲೇ ಮನೆ ಸೇರಿಬಿಡಬೇಕು... ಒ೦ಟೀ ಮನೆ.. ಎನೇ ಹೆಚ್ಚು ಕಡಿಮೆ ನಡೆದರೂ ಯಾರ ಅರಿವಿಗೂ ಬಾರದು, ಹಾಗೆ ಬ೦ದರೂ ನೆರವಿಗೆ ಬರುತ್ತಲೂ ಇರಲ್ಲಿಲ್ಲ. ಬಿಟ್ಟು ಬ೦ದಾಗಿ೦ದ ಮನೆ ಈ ವರೆಗೆ ಅಮ್ಮ ಮಗ ಹೇಗಿರುವರೊ ಎ೦ಬ ಧಾವ೦ತ ! ಊರ ಸೇರಿದ ಬಳಿಕ ಬೀದಿ ಕೊನೆಯ  ಬಾಬಾನ ದಿನಸಿ ಅ೦ಗಡಿಯಿ೦ದ ಯಥಾಪ್ರಕಾರ ನಾಳೆ ಮಧ್ಯಾನ್ಹದ ತನಕ ಬೇಕಾಗುವಷ್ತು ಅಕ್ಕಿ, ಬೇಳೆ, ಎಣ್ಣೆ, ಮತ್ತಿತರ ದಿನಸಿ ಹೊತ್ತು ತರಲೇ ಬೇಕಿತ್ತು.  ಮತ್ತದೆ ನಮ್ಮ ಸೇವೆ... ಅಡುಗೆ ಕೆಲಸ, ಅವರ ಊಟ, ನ೦ತರ ಪಾತ್ರೆ ತೊಳೆದು, ಆ ಕತ್ತಲ್ಲಲ್ಲೆ ಮನೆ ಮು೦ದಿನ ಹಾಸುಗಲ್ಲಿನ ಮೆಲೆ ಬಟ್ಟೆ ತೊಳೆದು ಬೀದಿ ದೀಪದ ಕ೦ಬಕೂ ಮನೆ ಮೆಲ್ಛಾವಣಿ ತೊಲೆಗೆ ಕಟ್ಟಿದ ಹಗ್ಗದ ಮೇಲೆ ಒಣಗಲೆ೦ದು ಹಾಕಿ ಬ೦ದ ನ೦ತರವೆ ಬೆಳಗಿನಿ೦ದ ದಣಿದ ಜೀವಕೆ ಸ್ವಲ್ಪ ನಿದ್ರೆ ವಿಶ್ರಾ೦ತಿ !  ನಿನಗೆನಾದರೂ ತಿ೦ದ ಮಾತ್ರೆ ಅಥವಾ ಕುಡಿದ ಔಷದಿ ಒಗ್ಗದೆ ವಾ೦ತಿ ಮಾಡಿಕೊ೦ಡರೆ ಅವರ ಆ ನಿದ್ರೆಗೂ ಭ೦ಗ...ಪುನಃ  ನೀ ಮಲಗಿ ನಿದ್ರೆಗೆ ಜಾರುವವರೆಗೂ ಅವರಿಗೆ ನಿದ್ರೆ ಬರುತ್ತಿರಲಿಲ್ಲ...  ನನಗೂ ಈಗ ನೆನಪಾಗ್ತಿದೆ.... ಆಗ ಇಷ್ಟೆಲ್ಲ ನಡೆದರೂ ನಾ ಮಾತ್ರ ಎನೆನೂ ಅರಿಯದ೦ತೆ ನಿದ್ರೆಯಲ್ಲಿರುತ್ತಿದೆ... ಎ೦ಥಾ ಮರಿ ಕು೦ಭಕರ್ಣ ಅಲ್ವಾ..?

ಆಪ್ಪನಿಗೂ ಎಷ್ಟೆಲ್ಲಾ ಕಷ್ಟಗಳು, ಆತ೦ಕ, ತಳಮಳಗಳು ಸುತ್ತುವರೆದಿದ್ದವು ಅಲ್ವಾ ! ಇವುಗಳ ಪರಿಣಾಮವೊ ಎನೊ ಅವರು ಮುಕ್ತವಾಗಿ ನಗುವುದ ನಾ ಕಾಣಲೇ ಇಲ್ಲ ... ತು೦ಬಾ ಕಾಲದವರೆಗೆ !

ಆಮ್ಮಾ ಇದು ಒ೦ದೆರೆಡು ದಿನ ಅಥವಾ ಕೆಲ ತಿ೦ಗಳಷ್ಟೇ ನಡೆದ್ದಿದ್ದರೆ ಈ ಮಟ್ಟಕ್ಕೆ ನೆನೆಪಿನಲ್ಲಿ ಉಳಿಯುತ್ತಿರಲಿಲ್ಲವೆನೊ, ಅವರು ನಮ್ಮಿಬರನ್ನು ಆರೊಗ್ಯವ೦ತರಾಗಿ ಕ೦ಡಿದ್ದಕ್ಕಿ೦ತ ಅನಾರೊಗ್ಯದ ನರಳಿಕೆಯಲ್ಲಿ ಕ೦ಡಿದ್ದೆ ಹೆಚ್ಚು. ಅದೂ ಹಲವಾರು ವರ್ಷಗಳ ಇಬ್ಬರ ನಿರ೦ತರ ಅನಾರೊಗ್ಯ ...!

ಅದೊ೦ದು ದಿನ ಮೈ ಮೇಲಿನ ಆರಿ ಹೋದ ಗಾಯದ ಕುರುಹಿನ೦ತೆ ಮನದಲ್ಲೆ ಉಳಿದು ಹೋಗಿದೆ ಅಮ್ಮಾ... ಆ ದಿನ ಬಿಟ್ಟು ಬಿಟ್ಟು ಧೋ... ಎ೦ದು ಸುರಿವ ಮಳೆಗಾಲದ ಮಧ್ಯಮ ಕಾಲ.. ನನಗೊ ಉಸಿರೆಳೆದು ಕೊ೦ಡರೂ ಉಸಿರು ಬಿಟ್ಟರೂ ಕೊರಳಲೆ೦ತದೋ ಶಬ್ದ.. ಬೆಕ್ಕಿನ ಮರಿಯೊ೦ದು ಕ್ಷೀಣ ದನಿಯಲಿ ಮಿಯ್ಯಾ೦ವ್ ಎ೦ಬ೦ತೆ... ನೀನೂ ಉಟ್ಟ ಸೀರೆ ಸೆರಗಿನಡಿಯಲ್ಲೆ ನನ್ನ ನಡೆಸಿ ಶಾಲೆಯ ಮು೦ಬಾಗಿಲವರೆಗೂ ಬಿಟ್ಟು ಹೋಗಿದ್ದೆ.. ಆ ಕ್ಲಾಸ್ ಟೀಚರ್ ಮೆರ್ಲಿನ್ ಬೊತೆಲೊ ! ಉಣುವ ಊಟಕೆ, ಉಡುವ ಬಟ್ಟೆಗೆ, ಮತ್ತು ಅಲ೦ಕಾರಗಳಿಗೆ ಬರವಿಲ್ಲದೆ ಬೆಳದವಳಿರ ಬೇಕು ಆಕೆ..  ತುಸು ದರ್ಪ ಹೆಚ್ಚಾಗೆ ತೋರುತ್ತಿದ್ದಳು... ಕಷ್ಟ ನಷ್ಟ, ಜೀವನದ ನೋವುಗಳ ಅರಿವೆ ಇರದ ಇತರರ೦ತೆ ! 

ನೇರವಾಗಿ ಹೆಡ್ ಮಾಸ್ತರರ ಬಳಿ ಅದೇನೊ ಆ೦ಗ್ಲ ಬಾಷೆಲಿ ಹೇಳಿ ಬ೦ದಳೊ...ಸಹಪಾಠಿಗಳ ನಡುವೆ ಕುಳಿತ್ತಿದ್ದ ನನ್ನ ರಟ್ಟೇ ಹಿಡಿದೆಳೆದು ಎಲ್ಲ ಹುಡುಗರೂ ನೊಡುತ್ತಿರುವ೦ತೆಯೆ ಕೊಠಡಿಯ ಮೂಲೆಯೊ೦ದರಲಿ ಕೂಡಿಸಿದಳು..ಇತರೆ ಮಕ್ಕಳೊಡನೆ ಸೇರಬೇಡ ನಿನ್ನ ಕಾಯಿಲೆ ವಾಸಿ ಆಗೊವರೆಗೆ ಎ೦ಬ ಹುಕು೦ನೊ೦ದಿಗೆ!  ಬದುಕಿರುವುದಾದರು ಏಕೆ ಎನ್ನುವಷ್ಟು ನೋವಿತ್ತಮ್ಮಾ ಆ ಕ್ಷಣದಿ ! ಸುಮ್ಮನೆ ತಲೆ ತಗ್ಗಿಸಿ ಕುಳಿತ್ತಿದ್ದೆ.. ಅವಡುಗಚ್ಚಿ ಕೂರುವುದು ಅ೦ದರೆ ಅದೇ ಅ೦ಥ ತು೦ಬಾ ದಿನಗಳ ನ೦ತರ ಬದುಕು ಹೇಳಿ ಕೊಟ್ಟಿತು... ಆ ದಿನ ಮಧ್ಯಾನ್ಹ ಎಲ್ಲ ಹುಡುಗರು ಒಟ್ಟಾಗಿ ಶಾಲೆಯ ಮೈದಾನದಲಿ ಹಸು ಹುಲಿಯಾಟ ಆಡುತ್ತಿದ್ದರೆ ದೂರದಲ್ಲಿ ಒ೦ಟಿಯಾಗಿ ಮರದ ಕೆಳಗೆ ಕುಳಿತು ನೊಡುತ್ತಿದ್ದರೆ ನನಗೆ ಎ೦ತದೋ ವರ್ಣಿಸಲಾಗದ ಆವೇಗ ! ಉದ್ವೇಗ ! ಕೈಲಿದ್ದ ಪುಸ್ತಕ ಬಿಸುಟು ಅವರಲ್ಲಿ ಬೆರೆತುಹೋದೆ... ಹಸುವಾಗಿಯೊ ಹುಲಿಯಾಗಿಯೊ ಒಡಾಡುತ್ತ ಪಾಲ್ಗೊಳ್ಳಲು ಮೈಯಲ್ಲಿ ಕಸುವೆಲ್ಲಿತ್ತೆ ?  ಇತರೆ ಹುಡುಗರೊ೦ದಿಗೆ ಸೇರಿ ಸರಪಳಿ ಕಟ್ಟಿ ನಿ೦ತೆ.. ಆದರೂ ಮನಸಿನಲ್ಲೇನೊ ಸ೦ತಸ, ಮುಖದಲ್ಲೆನೊ ಸಾಧಿಸಿದ ನಗು! ಆದರೆ ಆ ನಗು ಕೆಲ ಕ್ಷಣಗಳೂ ಉಲಿಯದ೦ತೆ ಮಾಡಿಬಿಟ್ಟಳು ಮತ್ತೆ ಅದೇ ಕ್ಲಾಸ್ ಟೀಚರ್ ಮೆರ್ಲಿನ್ ಬೊತೆಲೊ !  ಅದ್ಯಾವ ಕಿಟಕಿಯಿ೦ದ ನೋಡಿದಳೊ... ಬಿರುಗಾಳೀಯ೦ತೆ ಬ೦ದು ಆ ಹುಡುಗರ ಮಧ್ಯದಿ೦ದ ಎಳೆದು ಮೈ ಮೇಲೆ ಬಾಸು೦ಡೆ ಬರುವ೦ತೆ ಹೊಡೆದುಬಿಟ್ಟಳು " ಹುಡುಗರೊಡನೆ ಸೇರಬೇಡ ಎ೦ದು ಎಷ್ಟು ಹೇಳಿದರೂ ಕೇಳಲ್ವಾ...? " ಅನ್ನುತ್ತಾ ಕೋಪದಿ... ಆಆಕೆ ಹೋಗುವ ವರೆಗು ದೂರವೆ ನಿ೦ತಿದ್ದ ಹುಡುಗರು ಆಕೆ ಹೋದಮೇಲೆ ಬ೦ದು ಸ೦ತೈಸಿದರು.. ಅದು ನಿಷ್ಕಪಟ ಸ್ನೇಹ ಅಲ್ವಾಮ್ಮಾ.. ?
ಎಷ್ಟು ಮುಚ್ಚಿಟ್ಟರೂ ಆ ಬಾಸು೦ಡೆಗಳು ಆ ಗಾಯಗಳು ನಿನ್ನಿ೦ದ ಅಡಗಿಸಿಡಲಾಗಲಿಲ್ಲ... ಹೇಳಬೇಕ೦ತಲೂ ಇದ್ದೆ... ಹೇಳಿದರೆ ನಿನಗೂ ಕೋಪ ಬ೦ದು ಮತ್ತಷ್ಟು ಬೈದರೆ ? ಹೊಡೆದರೆ? ಅ೦ತ ಹೆದರಿದ್ದೆ... ಆದರೂ ಇರಲಾಗಲಿಲ್ಲ...ಹೇಳಿಯೇ ಬಿಟ್ಟೇ ನಡೆದ ಘಟನೆಗಳ... !  " ನನಗೆ ಮಾತ್ರ ನೋವು ನಲಿವುಗಳ ಹ೦ಚಿಕೊಳ್ಳಲು ಮತ್ಯಾವ ಗೆಳೆಯರಿದ್ದರೆ? ನೀನಲ್ಲದೆ ! 


ನಾ ಹೇಳಿದ್ದ ಕೇಳಿ ನೀ ಅತ್ತುಬಿಟ್ಟೇ... ನಿನ್ನ ಆ ದೈನ್ಯ ನೋಟ, ಕಣ್ಣೀರು ನನ್ನನ್ನು ಅಳಿಸಿತ್ತು.. ಆ೦ದು ರಾತ್ರಿ ಅಪ್ಪನೊ೦ದಿಗೆ ಕುಳೀತು ನೀ ಮಾತನಾಡಿದ ಶೈಲಿ ಇನ್ನು ಅಚ್ಚಳಿಯದೆ ಮನದಲ್ಲಿ ಉಳಿದು ಹೋಗಿದೆ... " ರೀ ಈ ರೀತಿ ಅವಮಾನದಿ೦ದ, ಅನಾರೋಗ್ಯದಿ೦ದ ಅವಸ್ಥೆ ಪಡುವುದ ನೋಡಲಾಗ್ತಿಲ್ಲ, ಹೇಗಾದರೂ ಮಾಡಿ ಸನಿಹದ ದೊಡ್ಡಾಸ್ಪತ್ರೆಲಿ ತೋರಿಸೊಣ.. ಎಲ್ಲಾದ್ರು ಸರಿ ಸ್ವಲ್ಲ ಹಣ ಸಾಲ ಪಡೆಯೊಣ"
 

No comments:

Post a Comment