Wednesday 23 November 2011

ಕಾಲಿಗಡರಿ ಕೊಂಡ ಆದರದ ಅಷ್ಟೂ
ಸಂಬಂಧಗಳ  ಬದಿಗೆತ್ತಿಟ್ಟು, ಬಂಧು ಮಿತ್ರರ
ನಿರಂತರ ಒಡನಾಟದಿಂದ  ಹೊರಬಿದ್ದು
ನಾನೇ ನನ್ನಲ್ಲಿ ನಿನ್ನಾವರಿಸಿಕೊಂಡಿದ್ದೆ !
ಆದರೆ ನೀಲೀ....
ಮುತ್ತು ಮಾರುವ ಚಂದಿರ,
ಮಿತ್ತು ದೂತರ ಇಂದಿರ
 ಗಗನದೆತ್ತರಕೆ ಹಾರುವ ಹಕ್ಕಿ,
ಬಾನ ಸೀರೆಗೆ ಅಂಟಿಕೊಂಡು  ಮಿನುಗುವ ಚುಕ್ಕಿ,
ಮತ್ತೆ .. ಇನ್ನು ಏನೇನೋ .. ತೋರಿಸಿ
ಮೌನಕೆ ಸದ್ದಿಲ್ಲದೇ ಏಕೆ ನೀನು
ಜೋತು ಹಾಕಿ ಕೊಂಡೆ... !

ಬಿಡೆ ಬದುಕೇನು ಬದುಕಲಾರದಷ್ಟು
ದುರ್ಭರ ಅಲ್ಲ ! ಅಂತರಾಳದಿ ಕದದ
ಅಗುಳಿ ತೆಗೆದು ನೀ ಒಳ ಬರುವ ಮೊದಲೂ
ತಕ್ಕ ಮಟ್ಟಿಗೆ ಮಟ್ಟಸವಾದ ಬದುಕೂ ಇತ್ತು...
ನಾನೇ ಹೆಕ್ಕಿ ಕೊಟ್ಟ ಬಣ್ಣಗಳ ಬಳಿದುಕೊಂಡು
ಕಾಮನ ಬಿಲ್ಲಂತೆ, ಕೋಲಮಿಂಚಿನಂತೆ,
ನಿನ್ನೊಡನೆ ತಳುಕು ಹಾಕಿ ಬೀಗಿತ್ತು..
ಅದೆಲ್ಲ ಹಳೆಯ ಕಥೆ...
ಈಗ ಉಳಿದಿರುವುದೆಲ್ಲ ಅದೇ ಹಳಮಾಸಲು ಬಣ್ಣದ ನಗೆ, ಪೇಲವ ನಡೆಯ ಬದುಕೇ...!

No comments:

Post a Comment