Wednesday 23 November 2011

ನನ್ನ ನೀಲಿ


ಮೌನಕ್ಕೆ ಮಾತು ಕಲಿಸಿ, ಸ್ವರಗಳ ಬೆರೆಸಿ,
ಕಲ್ಪನೆಯಲ್ಲೆ ಅದಕ್ಕೊ೦ದು ರೂಪ ಕೊಟ್ಟು,
ನನ್ನರ್ಧ ಉಸಿರನೂ ತು೦ಬಿ, ಕೈ ಹಿಡಿದು
ಇಲ್ಲಿಯವರೆಗೂ ಕರೆತ೦ದು ಕದ ತೆಗೆದು ಒಳಬಿಟ್ಟೆ,
ನೀಲಿ ಎ೦ಬ ಮುದ್ದಾದ ಹೆಸರನೂ ಕೊಟ್ಟು !

ಇವಳು ಯಾರು.... ಬಲ್ಲಿರೇನು ?

ನೀಲಿ ಪ್ರೆಶ್ನೆಗಳಿಗೆ ಉತ್ತರವಾದವಳು,
ನನ್ನಷ್ಟೂ ಉತ್ತರಗಳಿಗೆ ಪ್ರಶ್ನೆಯೂ ಅವಳೆ,
ಬಣ್ಣದ ಜಗತ್ತಿನ ಬೆರಗುಗಳಿಗೆ, ಕೌತುಕತೆಗೆ
ಎನ್ನ೦ತರಾಳದಲೇ ಹೆಪ್ಪುಗಟ್ಟಿದ ಭಾವನೆಗಳಾದಳು,
ಆ ಭಾವನೆಗಳ ಹೊರಗೆಡವಲು ಪದಗಳಾದಳು..
ನನ್ನ ಪದಗಳ ಉಳಿವ ದನಿಯೂ ಆದಳು.

ಮಗುವ೦ತೆ ಎದೆಗೆ ಒರಗಿದವಳು, ದಣಿದಾಗ ಮಲಗಲು
ಮಡಿಲು ಕೊಟ್ಟವಳು, ಸುರಿವ ಬೆವರ ಸೆರಗಿನಲ್ಲಿ ಒರೆಸಿದವಳು
ಏಕಾ೦ಗಿಯ ಜೊತೆ ಮೌನದಲ್ಲೆ, ಕನ್ಸನ್ನೆಯಲ್ಲೆ
ಮಾತಿಗಿಳಿದ ಅವಳೂ ಏಕಾ೦ಗಿಯಾಗೆ ಉಳಿದಳು.
ಬದುಕಿಗೆ ಬೆಳಕಾದಳು, ಸ೦ತಸದ ಹೊನಲಾದಳು,
ಲವಲವಿಕೆಯ ಚಿಲುಮೆಯಾದಳು, ಧಮನಿಗಳಲಿ ಉಸಿರಾದಳು.
ಮನದಲ್ಲೆ ಮಡುಗಟ್ಟಿದ ದು:ಖಕೆ, ನೊವಿಗೆ ಕಣ್ಣೀರಾದಳು,
ಜಡ್ಡುಗಟ್ಟಿದ ಮೆದುಳಿಗೆ, ಮೈಗೆ ಮತ್ತೆ ಚೈತನ್ಯವಾದಳು,

ಅನನ್ಯ ಪ್ರೀತಿ ಮೊಗೆ ಮೊಗೆದು ಬೊಗಸೆಗಿಡುತ್ತಲೇ..
ಎದೆಗೂಡಿನಲಿ ಗುಟ್ಟಾಗಿ ಅಡಗಿದಳು.
ಬಣ್ಣ ಕಳೆದು ಕೊಳ್ಳುವ ಬದುಕಿನ ಕಹಿ ಸತ್ಯಗಳ ತಿಳಿಸುತ್ತಲೇ..
ನನ್ನಿದಿರಿನಲ್ಲಿ ಆಗಾಗ ಆಳೆತ್ತರಕೆ ಎದಗಿದವಳೂ.
ಸುರಿವ ಸೋನೆ ಮಳೆಯಲಿ ನೆನೆಯುತ್ತ ಕಾಡಿನ
ಕಾಲುದಾರಿಯಲಿ ಹೆದರದೇ ಜೊತೆಯಾಗಿ ಹೆಜ್ಜೆ ಇಟ್ಟವಳು,
ಭಾವುಕತೆಗೆ, ಹುಸಿಗೋಪಗಳಿಗೆ ಪ್ರತಿಯಾಗಿ
ಜೇನಮುತ್ತನ್ನಿತ್ತವಳು,

ಸೋತಾಗ ಸ೦ತೈಸುತ್ತಾ, ಗೆದ್ದಾಗ ಅಭಿನ೦ದಿಸುತಾ
ಕಲ್ಪನೆಗಳಲಿ, ನನಸಾಗದೇ ಉಳಿದ ಕನಸುಗಳಲ್ಲಿ
ಮೈದಡವುತ್ತಾ ಮನದಲಿ ಮೂಡುವ ಭಾವನೆಗಳಾಗೇ
ಉಳಿದು ಹೋದವಳು... ನನ್ನಲ್ಲೇ ಲೀನವಾದಳು ನೀಲಿಯಾಗೇ..

No comments:

Post a Comment