Wednesday 23 November 2011


ಇಲ್ಲ ಬೇಕಾಗುವುದಿಲ್ಲ ನಿನ್ನ ಒಲವು ಈಗ,
ಇಲ್ಲ ಕಾಡುವುದಿಲ್ಲ ನಿನ್ನ ಕನಸು ಈಗ.
ನಿನ್ನ ಮರೆತೇ ಬಿಟ್ಟಿದೆ ನನ್ನ ಮನಸು
ಇನ್ನೇಕೆ ನನಗೆ ಆ ಚುಕ್ಕಿ ಲೋಕದ ಕನಸು?

ಬೇಡ ನನಗೆ ಮುತ್ತು ಮಾರುವ ಚ೦ದಿರ,
ಬೇಡ ನನಗೆ ಮಿತ್ತು ದೂತರ ಇ೦ದಿರ,
ಮಾತು ಮಾತಿಗು ಮುನಿವ ಹಕ್ಕಿಯ
ಸೆರಗು ಹಿಡಿದು ಬೇಡಲಾರೆ.... ಕಾಯಲಾರೆ !
ಬೇಡವೇ ಬೇಡ ನಿನ್ನಹ೦ಕಾರದ ಸೆರೆಯ ಪ೦ಜರ.

ಮುಟ್ಟಲಾರೆ ಮಲ್ಲಿಗೆಯ ಹಾರ,
ಮೆರೆಯಲಾರೆ ನಾ ನಿನ್ನ ದರಬಾರಿನಲ್ಲಿ,
ಆ ನಿನ್ನ ಜಡೆಯ ಜಡ ಭಾರದಲ್ಲಿ.

ಕೊನೆಗೆ ನೀನು ನನ್ನೊಳಗೇ ಇರಲಿಲ್ಲ..
ನೀನು ನಿನ್ನೊಳಗೂ ಇಲ್ಲ..!
ಈಗ ನೀನು ನನ್ನ ಹಕ್ಕಿಯೂ ಅಲ್ಲ
ನೀ ನನಗೆ ಬೇಕಾಗುವುದೂ ಇಲ್ಲ.

ನಾ ದೀನನು ಅಲ್ಲ, ನೀ ಧಾನಿಯೂ ಅಲ್ಲ.
ಇನ್ನೆ೦ದಿಗೂ ನಾನು ಚಾಚಲಾರೆ ಕೈ,
ಬೇಡಲಾರೆ, ಬೇಕಿಲ್ಲ ನಿನ್ನ ಮೈ, ಮನ.

ಕಲ್ಲು ಬೆಟ್ಟ ಗುಡ್ಡಗಳಲಿ ಅಲೆದಾಡುವ
ವಿಷ ಹಕ್ಕಿ ನೀನೆ ಅಲ್ಲವೆ? ಒಲವ ಕೊಲ್ವ
ಒಲುಮೆ ಹಕ್ಕಿ ನೀನೇ ಅಲ್ಲವೆ ?

ಇವೆ ನನಗೆ ನನ್ನವೆ ಕಣ್ಣುಗಳು..
ಯಾಕೆ? ಇನ್ನೇಕೆ ನೋಡಲಿ ನಾ ಲೋಕವನ್ನ
ನಿನ್ನವೇ ಕಣ್ಣುಗಳ ಮೂಲಕ ?

ಕೇಳೇ.. ಗೆಳತಿ.. ಇ೦ದಿನಿ೦ದ
ನಿನ್ನ ದಾರಿ ನಿನಗೆ...
ನನ್ನ ದಾರಿ ನನಗೆ !
ಬರುವುದಿಲ್ಲ ಇನ್ನೆ೦ದಿಗೂ
ನೀನು ಇರುವಲ್ಲಿಗೆ !
ಖ೦ಡಿತವಾಗಿಯೂ....

No comments:

Post a Comment