Wednesday 23 November 2011

ಬದುಕೆಂದರೆನೆ  ತಿರುವುಗಳ ಹಂದರವೇನಅಂದುಕೊಂಡು ಹಲುಬುತ್ತಾ... ಹೆಗಲಿಗೊಂದು ಭಾ೦ಧವ್ಯಗಳ ನೊಗ ಹೊತ್ತುಕೊಂಡು ಕಾಲುಗಳಿಗೆ ಚಕ್ರ ಕಟ್ಟಿಕೊಂಡು ಅನ್ನ ಅರಸುತ್ತಾ  ಗಿರಿಗಿಟಲೆ ತಿರುಗುತ್ತಿದ್ದೆ.

ಯಾವೊದೋ ಅಂತಹುದೊಂದು ತಿರುವಿನಲ್ಲಿ ಊಹೆಗೂ ನಿಲುಕದ ತನ್ಮಯತೆಯೊಡನೆ ಇದಿರಾದೆ ಹುಸಿ ನಗು ಬೀರುತ್ತಾ.... ಮುಗಿಲ ಮಿಂಚಿಗೆ ಬೆದರಿದ್ದ ಕಾಮನ ಬಿಲ್ಲಲಿ ಬೊಗಸೆಯೊಡ್ಡಿ ಅಷ್ಟೂ ಬಣ್ಣಗಳ ಹದವಾಗಿ ಬೆರೆಸಿ ಮೈ ಕೈ ಕೆನ್ನೆಗಳಿಗೆ ಸವರಿಕೊಂಡು ಆವರಿಸಿಕೊಂಡುಬಿಟ್ಟೆ ಮೈ ಮನವೆರದರಲ್ಲೂ, ನನ್ನೀ ಬದುಕಿಗೂ ಒಂದಷ್ಟು ಬಣ್ಣದ ಪ್ರಪಂಚ ತೋರಲು.

ನಿಗದಿತ ವೇಳೆಯಲ್ಲಿ ಶಿವ ಮಂದಿರ ತಲುಪಲು ಗಾವುದಗಳ ನಸುಕಿನಲ್ಲೆ ದಾಟಿ ಬಂದಿದ್ದೆ ನಾನೂ,ಇದ್ದುದರಲ್ಲೇ ಮಟ್ಟಸವಾದ ಉಡುಗೆಯೊಂದ ತೊಟ್ಟು ಅತೀ ಸರಳವಾಗಿ.  ನಮ್ಮೀ ಪ್ರಥಮ ಮಿಲನದ ಖುಷಿಯ ಛಾಯಾಲೋಲನ ಕಿವಿಯಲ್ಲಿ ಉಸುರಿದ್ದೆಯೇನೋ... ಮೇಲೇರುತ್ತಾ ಅವನ ಮೈ ಬಿಸಿ ನಮಗೂ ಚುರು ಚುರು ಮುಟ್ಟುತ್ತಿತ್ತು ದೇಗುಲದ ಹೆಬ್ಬಾಗಿಲ ತುಳಿಯುತ್ತಿದ್ದಂತೆಯೇ ನೂರಾರು ಮೈಲಿಗಳ ಪಯಣದ ಶ್ರಮ ನೀಗಿ ಎಂತದೋ ಭಾವ ಪರವಶತೆ, ಪುಳಕ ಮನಸಿಗೆ.

ಹೆಬ್ಬಾಗಿಲಲ್ಲೇ ದೈತ್ಯ ಗಾತ್ರದ ಗಣಪನ ನಮಿಸಿ ದಾಟಿದರೇನೆ ಶಿವನ ದರುಶನಜನರ ನೋವು ನಲಿವು, ಒಳಿತು, ಕೆಡಕು, ಇದಾವುದರ ಪರಿವೆಯೇ ತನಗಿಲ್ಲವೆನೋ ಎಂಬಂತೆ ಚಕ್ಕಂಬಕ್ಕಳ ಹಾಕಿಕೊಂಡು ಬಿಸಿಲಿಗೆ, ಚಳಿಗೆ, ಮಳೆಗೆ, ತಂಗಾಳಿಗೆ ಬರಿ ಮೈಯೊಡ್ಡಿ ಧ್ಯಾನದಲ್ಲೇ ತಲ್ಲೀನನಾದ ಎತ್ತರದ ಮೂರ್ತಿ ಎದುರು ಅವನಂತೆಯೇ ಎದೆ ಸಟೆಸಿ, ಅವನ ಅಂದಿನ ದ್ರಾಕ್ಷಾಯಿನಿಯಲ್ಲೂ ಕಂಡಿರದ ಭಕ್ತಿ ಭಾವದಲಿ ಕಣ್ಮುಚ್ಚಿ ಕುಳಿತು, ನನ್ನ ಬರುವಿಕೆಗೆ ಎದುರುನೋಡುತ್ತಿದ್ದ... ನಲ್ಲೆ....... ನಿನ್ನ ಕಂಡೊಡನೆ " ಇವಳೇನಾ ಕಳೆದ ಜನ್ಮದಲಿ ಇನ್ನಿಲ್ಲದಂತೆ ಪ್ರೀತಿಸಿ ಕಾಡಿಸಿ, ಮಮತೆಯ ಮೊಗೆ ಮೊಗೆದು ಬೊಗಸೆಗಳಲಿತ್ತವಳು.? .... ಕ್ಷುಲ್ಲಕ ಕಾರಣಕ್ಕೆ ಕುಪಿತಳಗಿ ಊರ ಹೆಬ್ಬಾಗಿಲ ಬಳಿ ಉರಿ ಹಾಕಿದ್ದ ಬೆಂಕಿ ಜ್ವಾಲೆಗಳಲಿ ಕಣ್ಣೆದುರಲ್ಲೇ ಉರಿ ಉರಿದು ಹೋದವಳು? ಅನಿಸುತ್ತಿತ್ತ

ಮತ್ತೊಂದು ಜನ್ಮದ ಅರ್ದ ಜೀವನ ಕರಗೇ ಹೊಯ್ತಲ್ಲೇ  ನಿನ್ನ ಮತ್ತೆ ಹುಡುಕಿ ಭೇಟಿಯಾಗಲು !

ಪೂಜೆ ಮಾಡಿಸೋಣವಾ ಎಂಬ ನಿನ್ನ ಉಲಿಗೆ ಹಾವಿನಂತೆ ತಲೆದೂಗಿ ಕೈಲಿ ತಂದಿದ್ದ ಪಾರಿಜಾತ ಪುಷ್ಪ, ಕಲ್ಪವೃಕ್ಷ ಫಲ, ಹೊಂಬಾಳೆ, ಸಿಂದೂರ, ಕರ್ಪೂರಗಳ ನಿನ್ನ ಕೈಗಿತ್ತು ನಿನ್ನ ಬಿಳಿಸೀರೆಯ ಕಪ್ಪಂಚು ಉಳ್ಳ ಸೆರಗು ಹಿಡಿದು  ಮಾತೆ ಬರದ ಮಗುವಿನಂತೆ  ಬರುತ್ತಿದ್ದೆ.  ನೀ ಮುಟ್ಟಿದ ಮೂರ್ತಿಗಳನ್ನೆಲ್ಲ  ನಾನು ಮುತ್ತಿ ಕಣ್ಣುಗಳಿಗೆ ಒತ್ತಿಕೊಳ್ತಿದ್ದೆ ... ಅದಾವ ದೇವರು ? ಅದರ ಹೆಸರಾದರೂ ಏನು? ... ಒಂದೂ ತಿಳಿಯದಿದ್ದರೂ!
ಕೊಟ್ಟ ಪೂಜೆ ಸಾಮಾಗ್ರಿಗಳ ಪಡೆದ  ಹಿರಿಯ ಅರ್ಚಕ ನಮ್ಮ ಹಿಂದಿನ ಜನ್ಮದಿ ಅರಮನೆಯ ಪ್ರಧಾನ ಅಮಾತ್ಯನೇನೋ  ಅನಿಸುತ್ತಿತ್ತು ಅವನಿಗೂ ಏನನಿಸಿತೋ ಏನೋ... ಈರ್ವರ ಕೈಗೂ ಮಂತ್ರ ಪುಷ್ಪ ಕೊಟ್ಟು ಪೂಜಾ ಪಲಕ ಮುಟ್ಟಿಸಿ " ಉಮಯ ಸಹ ದೆವೆಶು ನಂದಿ ವಾಹನಂ ಏವ ... ಭಸ್ಮ ಲೇಪನ ಸರ್ವಾಂಗಂ... ಏಕ ಬಿಲ್ವಂ ಶಿವಾರ್ಪಣಂ..." ಎಂದು ಹೇಳುತ್ತಾ... " ಅಥ ಶುಭ ತಿಥೌ ಶೋಬನೆ ಮಹೂರ್ಥೆ, ಅದ್ಯ ಬ್ರಹ್ಮನೇ.. ದ್ವಿತೀಯ ಪರಾರ್ದೆ... ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೆ,,,,,"  ಎಂದಾರಂಬಿಸಿ ಹೆಸರು, ನಕ್ಷತ್ರ, ಗೋತ್ರಅಂತೆಲ್ಲಾ..ಮಾಹಿತಿ ಕೇಳಿ ಪುನಃ ಉಚ್ಚರಿಸಿ ಪೂಜೆ ಮುಗಿಸಿದಅಷ್ಟಕ್ಕೇ ದೈವಕ್ಕೆ ತೃಪ್ತಿ ಆಗಲಿಲ್ಲವೇನೋ.... ನಮ್ಮೀ ಪ್ರಥಮ ಮಿಲನದಿಂದ. ! . ಅರ್ಚಕನಿಂದಲೇ " ಸುಪುತ್ರಾ ಪ್ರಾಪ್ತಿರಸ್ತು.... ದೀರ್ಘ ಸುಮಂಗಲೀ  ಭವಾ .. " ಅಂದೆಲ್ಲಾ ಅಶೀರ್ವದಿಸಿಯೇ ಬಿಟ್ಟಾ ... !    ನನ್ನಂತೆಯೇ ನಿನಗೂ ದಿಗ್ಭ್ರಮೆ ! ಕೆಲ ಕಾಲ  ಮಾತೆ ಹೊರಡಲಿಲ್ಲ ಒಣಗಿದ ಗಂಟಲಿನಿಂದ.... ಕೈಗಿತ್ತ ಎರಡು ಚಮಚ ತೀರ್ಥದ ನೀರು ಗಂಟಲ ತೇವ ಮಾಡುವ ತನಕ !
  
ಇಂಥಹ ಅಪೂರ್ವ ಮಿಲನದ ಮಾಧುರ್ಯ ಎಷ್ಟು ಮಂದಿ ಗೆಳೆಯರ ನಡುವೆ ನಡೆದಿರಲು ಅಥವಾ ನಡೆಯಲು ಸಾಧ್ಯ ಹೇಳು ?  ಇದೊಂದು ನಿದರ್ಶನ ಅಲ್ಲವೇನೆ ನಮ್ಮೀ ಮಿಲನದ ಸಂಭವ ವಿಧಿನಿಯಮಿತ  ಎಂದು ?
ಕಣ್ಮುಚ್ಚಿ ಈಗಲೂ ಕುಳಿತು ಕ್ಷಣ ಕಾಲ ಯೋಚಿಸಿ ನೋಡು ಎಷ್ಟು ಮುದ ಕೊಡುತ್ತದೆ ... ಅಲ್ವಾ ?

ನೀಲಿ ಭಾನಲಿ ಯಾರ ಹಂಗೂ ಇಲ್ಲದೆ ಯಾವುದರ ಪರಿವೆಯೂ ಇಲ್ಲದೆ ರೆಕ್ಕೆ ಚಿಮ್ಮಿಸುತ್ತಾ ಮೇಲಿಂದ ಮೇಲಕ್ಕೆ ಹಾರುವ ಹಕ್ಕಿಯ ಕಂಡಾಗಲೆಲ್ಲ ನಿನ್ನ ನೆನಪು ಮನದಾಳದಿಂದ ಉಮ್ಮಳಿಸುತ್ತ ಹೊರಬರುತ್ತೆನಿಜ ಹೇಳಬೇಕಂದರೆ ಅಂಥಾ ಸ್ವೇಚ್ಛೆ ಮತ್ತೆ ನಾ ಕಂಡಿದ್ದು ನಿನ್ನಲ್ಲೇ ನಲ್ಲೆ.

ಹೌದು.. ಅದಕ್ಕೂ ಇದೆ, ಮತ್ತೆ ಗೂಡ ಸೇರೋ ಹಾದಿ ಮರೆವ ಭಯ, ಭಾನೆತ್ತರದಿ ಹಾರುವಾಗ ಇದ್ದಕ್ಕಿದಂತೆ ಸುರಿವ ಮಳೆಗೆ ತೊಯ್ದು ಹೋಗುವ ಭಯ, ಬೇಸಿಲ ಬೇಗೆಯಲಿ ದಣಿವ ಭಯ, ಕಾಲು ಸಿಗದೇ ಹಸಿವು ಬಾಯಾರಿಕೆಯ ಭಯದಾರಿ ಮರೆತು ಗೂಡ ಸೇರದೆ ಮಧ್ಯದಲ್ಲೆಲ್ಲೋ ಕಳೆದು ಹೋಗುವ ಭಯ, ಅರಸಿ ಬಂದ ಕಾಳು ಸಿಗದೇ ಬರಿಗೈಲಿ ಗೂಡಿಗಿನ್ತಿರುಗುವ ಭಯ... ... ಒಂದೇ ...ಎರಡೇ... ಆದರೆ ಅದು ಎಂದೂ ಯಾರಲ್ಲೂ ಹೇಳಿ ಕೊಳ್ಳಲಾರದು .. ಹಾಗಂತ ಹಾರದೆ ಗೂಡಿನಲ್ಲೇ ಉಳಿಯಲಾರದು
ನೀನು ಮಾತ್ರ ಯಾಕೆ ನೀಲಿ ಕೆಲವೊಮ್ಮೆ ಹೀಗೆ ?
     

ಅಡರಿಕೊಂಡ ಬದುಕಿನ ಅಷ್ಟೂ ಕಷ್ಟಗಳ ಅವಡುಗಚ್ಚಿ ದುಗುಡಗಳ್ಳಲ್ಲಿ, ಬವಣೆಗಳಲ್ಲಿ, ನಿರಾಸೆಗಳಲ್ಲಿ,  ನಿರಂತರ ಸೋಲುಗಳಲ್ಲಿ,  ನನ್ನದೇ ಆದ ಹುಂಬತನದಿ, ಮೊಂಡು ದೈರ್ಯಗಳಲ್ಲಿ, ಮಾಡಿಕೊಂಡ ಅಷ್ಟೂ ಅವಘಡಗಳಲ್ಲಿ,  ಅವಸರಗಳಲ್ಲಿ,  ಆತಂಕಗಳಲ್ಲಿ,  ಹಂಚಿ ಹೋಗಿದ್ದ ಕ್ಷಣಗಳ  ಹೆಕ್ಕಿ ತಂದು ಬಾನಿಗೆ ಮೆತ್ತಿಕೊಂಡಿದ್ದ ತಾರೆಗಳ ಹೊಳಪಲ್ಲಿ ತೀಡಿ ಅದರ ಜ್ಞಾನದ ಉದಯಕ್ಕೆ ನಾಂದಿಯಾಗಿ ಮಟ್ಟಸವಾದ ಚೌಕಟ್ಟಿನಲ್ಲಿ ಬಿಗಿದಿತ್ತ ಮಾಟಗಾತಿ ನೀನು, ಮಾತುಗಳಿಗೆ ಮೌನ ಬೆರೆಸಿ ಮೌನಕ್ಕೂ ಅಷ್ಟು ಮಾತು ಕಲಿಸಿ ಎರಡಕ್ಕೂ ಹಿತವಾಗಿ ನಗುವಿನ ಲೇಪನ ಕೊಟ್ಟು ನನ್ನ ಮುಟ್ಟಿಗೆಯಲ್ಲಿತ್ತವಳು  ನೀನೆ.... ಮೌನದಾಕೆ... !  ಹೇಳಿ ಹೋಗು ಕಾರಣ... ಎನ್ನುತ್ತ್ತಿರುವಾಗಲೇ ನೀರಿನೊಳಗೆ ದುತ್ತನೆ ಜಿಗಿದು ಈಗಿದ್ದಳು... ಈಗಿಲ್ಲ... ಎಂಬಂತೆ ಮಾಯವಾಗೋ ಮೀನಿನಂತವಳು ನೀನೆ....  ಮೋಸದಾಕೆ !
ಯಾಕೋ ಇಂದು ನಿನ್ನ ನೆನಪಿನ ಮಳೆಯಲಿ ಮಿಂದ ಮನಸು ನಿನ್ನೊಡನೆ ಕಳೆದ ಮಧುರ ಕ್ಷಣಗಳ ಮೆಲಕು ಹಾಕುತಿದೆಅಂತರಾಳದಲ್ಲೆಲ್ಲೋ ಸುಳಿಯಲಿ ಸಿಲುಕೆ ಕಲಕುತ್ತಿದ್ದ ಅಷ್ಟೂ ಭಾವನೆಗಳು ಧಾರೆ ಧಾರೆಯಾಗಿ ಹೊಮ್ಮುತ್ತಿದೆ, ಮಳೆ ನಿಂತು ಹೋದ ಮೇಲೂ ಮರದಿಂದ ಜಿನುಗುವ  ಮಳೆ ಹನಿಯುಂತೆ ತೊನೆಯುತ್ತಲೇ ಇದೆ
ಹೌದೆ... ಹೇಳು..... ಸರಿ ತಪ್ಪುಗಳ ವಿಮರ್ಶೆ, ಆತ್ಮಾವಲೋಕನ, ನಾವೆಂದು ಮಾಡಿಕೊಂಡೆವುಎಂದೋ ಒಮ್ಮೆ ನಶಿಸಿ ಹೋಗೋ ರೂಪ, ಸೌಂದರ್ಯ, ಬೆಡಗು, ಬಿನ್ನಾಣ ಮೈ ಮಾಟ ಗಳಿಗೆ ಮಾರು ಹೋಗಿ ಚಿಗುರಿಸಿಕೊಂಡೆವಾ ಪ್ರೀತಿಯ ಹೆಮ್ಮರವನ್ನ...?
 ನಿನಗಿಷ್ಟ ಅಂದುದಕೆ ನಾ ತಲೆ ಆಡಿಸಿದೆ, ನನ್ನ ಅಷ್ಟೂ ಬೇಕುಗಳಿಗೆ ಬೇಡಗಳಿಗೆ ನೀ ಅಸ್ತೂ ಎಂದಿದ್ದೆಕೊಟ್ಟುಕೊಂಡ ಮುತ್ತುಗಳು ಮಾಡಿಕೊಂಡ ಬಿಸಿ ಅಪ್ಪುಗೆಗಳು ಎಂದೂ ನಮಗೆ ಮಿಗಿಲು ಎನಿಸಲೇ ಇಲ್ಲಾ... ನನಗೆ ನೀನು, ನಿನಗೆ ನಾನು... ಮಿಕ್ಕಿದ್ದೆಲ್ಲಾ ಏನು ? ಎಂಬಂತೆ ಸಾಗಿ ಬಂದೆವು " ಬಾಳಿನ ದಾರಿಯಲಿ ಪ್ರೀತಿಯೇ ಸಾಲು ಮರ.." ಎಂಬಂತೆ.. ! ಬಹು ದೂರ ಬಂದುಬಿಟ್ಟೆವು ಹೊರಟ ಸ್ಥಳದ ನೆನಪೂ ಮಾಡಿಕೊಳ್ಳದೆ, ಗಮ್ಯ ತಿಳಿಯದೆ, ಸರಿ ತಪ್ಪುಗಳ ಎಲ್ಲೇ ದಾಟಿ " ನಿನ್ನ ಪ್ರೀತಿ ಸೆಳವಿನಲ್ಲಿ ಸಿಕ್ಕಿ ಎನಾದೇನೋ ಇನಿಯ ನಾ ಎನಾದೇನೋ" ಎಂದು ಹಾಡುತ್ತಲೇ. ಸವೆಸಿದ ದಾರಿಯಲ್ಲಿ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ... ಇಷ್ಟಕ್ಕೂ ಅದಕ್ಕೆ ಸಮಯವಾದರೂ ಎಲ್ಲಿ ಕೊತ್ತುಕೊಂಡಿದ್ದೆವು ? ಪ್ರತಿ ಮಿಲನದ ಎಲ್ಲಾ ಕ್ಷಣಗಳು " ಕಣ್ಣ ಕಣ್ಣ ಸಲಿಗೆ ಸಲಿಗೆ ಅಲ್ಲ ಸುಲಿಗೆ" ಎಂಬುದೆಲ್ಲ ಎಷ್ಟು ನಿಜಾ ಅಲ್ವ...? ಪ್ರೀತಿಯ ಜೋಕಾಲಿಯಲಿ ಮನಸುಗಳೆರಡನ್ನು ಒಟ್ಟಿಗೆ ಕೂರಿಸಿ ಜೀಕುತ್ತಿದ್ದೆವು.

ಈಗ ಮಾತ್ರ ದುಮ್ಮಾನ ಯಾಕೋ ....?  ಆಗೆಲ್ಲ ಎಷ್ಟು ಹಿತವಾಗಿ ಹೇಳಿ ಕೊಳ್ಳುತ್ತಿದ್ದೆವು.. " ನನ್ನೊಳಗೆ ನೀನು, ನಿನ್ನೊಳಗೆ ನಾನು ಎಂದೆಲ್ಲ...  ಮತ್ತೇಕೆ ಈಗ " ನನ್ನೊಳಗೇ ನಾ ಇಲ್ಲ , ನಿನ್ನೊಳಗೆ ನಾ ಹೇಗೆ ? ಎಂಬಂತಹಾ ಮೌನ..? 

ನಿಂಗೆ ಗೊತ್ತ ಚಿನ್ನು... ಇಂದಿಗೂ ನಿನ್ನ ನೆನಪುಗಳನ್ನ " ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ ...." ಎಂದು ಕರೆದು ನಿನ್ನ ನೆನಪುಗಳ ಹೃದಯದಲ್ಲಿ ಆವರಿಸಿತೆಂದರೆ ಮನದಾಳದಲ್ಲೆಲ್ಲೋ ಬೆಳದಿಂಗಳ ಕಂಡು ದುವಿಲೆದ್ದು ಹರಿವ ಹೊನಲಂತೆ, ಕಡಲ ತೀರದ ಅಲೆಯಂತೆ.. ಏನೋ ಸಂಭ್ರಮ !

ಅಲೆ ಬಂದು ಕರೆಯುವುದೂ ನಿನ್ನೊಲುಮೆ ಅರಮನೆಗೆ .... ಒಳಗಡಲಾ ರತ್ನ ಪುರಿಗೆ.. ಅಲೆ ಇಡುವಾ ಮುತ್ತಿನಲೇ ಕಾಣುವುದು ನಿನ್ನೊಲುಮೆ ... ಒಳಗಿನಾ ಮೂರ್ತಿ  ಮಹಿಮೆ... .
ಛೇ... ಎಂಥದೋ ಚಪಲದಲಿ ತಂದು ನಿಲ್ಲಿಸುತ್ತದೆ., ಮನಸಿಗೆ ಸಡಗರ ತುಂಬುತ್ತದೆ ಸಿ.ಅಶ್ವಥ್  ದನಿಯಲಿ ಮೂಡಿ ಬಂದ ..  ಸಾಲುಗಳು... 

ಮತ್ತೆ ಬರುವೆ ಕಾದಿರು ಚಿನ್ನು... ಅದೇ ಮುರುಡೇಶ್ವರ ಕಡಲ ತೀರದಲಿ ಕಳೆದು ಹೋದ ನಿನ್ನ ಕಾಲಂದುಗೆಯ ಗೆಜ್ಜೆಗಳ ... ಹುಡುಕುತ್ತಾ......
                                                                                                   

1 comment:

  1. ಮುರುಡೇಶ್ವರ ಕಡಲ ತೀರದ ಮೂಲಕ ನನ್ನದೂ ಹಳೆ ನೆನಪು ಕೆದುಕಿಬಿಟ್ಟಿರಿ.

    ReplyDelete